1 : ಹೇ ದೇವಾ, ನಮ್ಮನೀಪರಿ
ವರ್ಜಿಸಿಬಿಟ್ಟೆ ಏಕೆ? /
ನೀ ಪಾಲಿಪ ಮಂದೆಯ ಮೇಲೀಗ
ಉರಿಗೋಪವೇಕೆ? //
2 : ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ
ಸಭೆಯನು /
ಸ್ಮರಿಸಿಕೊ ಸೊತ್ತಾಗ ನೀ ರಕ್ಷಿಸಿಕೊಂಡ
ಗೋತ್ರವನು /
ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್
ಶಿಖರವನು //
3 : ಬಿಜಯಮಾಡು ಪಾಳುಬಿದ್ದಿರುವ ಹಳೆಯ
ಆಲಯಕೆ /
ಶತ್ರು ಕೆಡವಿಹನು ನೋಡು ಗರ್ಭಗುಡಿಯನೇ
ಕೆಳಕೆ //
4 : ವೈರಿಗಳಾರ್ಭಟ ನಿನ್ನ ದರ್ಶನಾಲಯದ
ಮಧ್ಯೆಯಲಿ /
ಅವರ ಜಯ ಬಾವುಟ ಪವಿತ್ರ ಚಿಹ್ನೆಗಳಿಗೆ
ಪ್ರತಿಯಾಗಿ //
5 : ಕಾಡಿನಲೋ ಎಂಬಂತೆ
ಕೊಡಲಿಯನೆತ್ತಿ ಹಿಡಿದು /
ದೇಗುಲದಲಿ ಕೈಗೊಡಲಿ, ಚಮಟಿಗಳ
ಪಿಡಿದು /
6 :
ನಾಶಮಾಡುತಿಹರು ನೋಡು ಕೆತ್ತನೆಗಳ
ಕಡಿದು //
7 : ಅಗ್ನಿಗಾಹುತಿ ಮಾಡಿಹರು ನಿನ್ನ ನಾಮದ
ಮಂದಿರವನು /
ಹೊಲಸುಮಾಡಿ, ನೆಲಸಮಮಾಡಿಹರಿದೊ ನಿನ್ನ
ದೇಗುಲವನು //
8 : ‘ನಾಶ ಮಾಡೋಣ ಈ ಜನರನು’
ಎಂದಾಡಿಕೊಂಡಿಹರು /
ದೇಶದ ಸಭಾಮಂದಿರಗಳನ್ನೆಲ್ಲ
ಭಸ್ಮಮಾಡಿಹರು //
9 : ಆರಾಧನಾ ಚಿಹ್ನೆಗಳಿಲ್ಲ, ಪ್ರವಾದಿಗಳು
ನಮಗಿಲ್ಲ /
ಈ ಪರಿಸ್ಥಿತಿ ಎಲ್ಲಿಯತನಕ? ಬಲ್ಲವರಾರೂ
ಇಲ್ಲ //
10 : ಎಲ್ಲಿಯತನಕ ದೇವಾ, ಶತ್ರುನಿಂದೆಗೆ ನೀ
ಗುರಿಯಾಗುವೇ?/
ಅನವರತ ನಿನ್ನ ನಾಮವನು
ಧಿಕ್ಕರಿಸುವುದು ಸರಿಯೇ?/
11 : ಚಾಚಿದಾ ಬಲಗೈಯನೇಕೆ ಹಿಂದೆಗೆದುಕೊಂಡೆ /
ಬಚ್ಚಿಟ್ಟಾ ಕೈಯಿಂದ ನೀನವರನು ಚಚ್ಚಿಬಿಡೈ //
12 : ಆದಿಯಿಂದ ದೇವಾ, ನೀನೇ ನನಗೆ ಅರಸನು /
ಸಾಧಿಸುತ್ತಿರುವೆ ಜಗದೊಳುದ್ಧಾರವನು //
13 : ಸ್ವಶಕ್ತಿಯಿಂದ ಸಮುದ್ರವನೆ ಭೇದಿಸಿದೆ ನೀನು /
ಜಲರಾಶಿಯ ಭುಜಂಗಗಳ ತಲೆಜಜ್ಜಿದಾತ
ನೀನು //
14 : ಲೆವಿಯಾತಾನನ ಶಿರಗಳ ಖಂಡನ ಮಾಡಿದವ
ನೀನು /
ಕಾಡು ಮೃಗಕ್ಕವನನು ಕೂಳಾಗಿಸಿದವ ನೀನು //
15 : ಒರತೆ ಊಟೆಗಳ ಉಕ್ಕಿಸಿದಾತ ನೀನು /
ಹರಿವ ನದಿಗಳ ಬತ್ತಿಸಿಬಿಟ್ಟವ ನೀನು //
16 : ಹಗಲಿರುಳುಗಳಿಗೆ ನಿಯಾಮಕ ನೀನು /
ರವಿತಾರೆಗಳ ನಿರ್ಮಾಪಕ ನೀನು //
17 : ಜಗದೆಲ್ಲೆ ಮೇರೆಗಳನು ನಿಗದಿ ಮಾಡಿದೆ ನೀನು /
ಶೀತೋಷ್ಣಕಾಲಗಳನು ನೇಮಿಸಿದವನು
ನೀನು //
18 : ನೆನಪಿರಲಿ ಪ್ರಭು, ಶತ್ರು ನಿನಗೆ
ಮಾಡಿದಪಮಾನ /
ನಿನ್ನ ಪೂಜ್ಯ ನಾಮಕೆ ದುರುಳರು ಕಕ್ಕಿದ
ದೂಷಣ //
19 : ಕೊಡಬೇಡ ನಿನ್ನ ಬೆಳವಕ್ಕಿಯ ಪ್ರಾಣವ
ಕಾಡುಮೃಗಕೆ /
ನೀ ಮರೆತುಬಿಡಬೇಡ ನಿನ್ನ ದೀನದಲಿತರನು
ಒಮ್ಮೆಗೆ //
20 : ನಿನ್ನೊಡಂಬಡಿಕೆಯನು ಗಮನವಿಟ್ಟು
ಮಾನ್ಯಮಾಡು /
ಕಗ್ಗತ್ತಲಿಗು, ಬಾಧಕರಿಗು ಬೀಡಾಗಿದೆ ನಾಡು //
21 : ಕುಗ್ಗಿದವರು ಹಿಂದಿರುಗದಿರಲಿ
ಅವಮಾನದಿಂದ /
ಬಡವರು ಕೀರ್ತಿಸಲಿ ನಿನ್ನ ನಾಮವನು
ಭಕ್ತಿಯಿಂದ //
22 : ಎಚ್ಚೆತ್ತು, ದೇವಾ, ನಡೆಸು ನಿನ್ನ ನ್ಯಾಯವನು /
ಗಮನಿಸು, ಅನುದಿನ ದುರ್ಮತಿ ನಿನ್ನ
ನಿಂದಿಪುದನು //
23 : ಮರೆಯದಿರು ನಿನ್ನಾ ವಿರೋಧಿಗಳ
ಗದ್ದಲವನು /
ವೈರಿಯೆಬ್ಬಿಸುತ್ತಿರುವ ನಿರಂತರ
ದೊಂಬಿಯನು //