Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ / ಕಲಿಸು ನಿನ್ನ ನೀತಿಯನು ರಾಜಕುವರನಿಗೆ //
2 : ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ / ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ //
3 : ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ / ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ //
4 : ದೀನದಲಿತರನಾತ ಉದ್ಧರಿಸಲಿ / ಬಡಬಗ್ಗರಿಗೆ ನ್ಯಾಯ ದೊರಕಿಸಲಿ / ಪ್ರಜಾಹಿಂಸಕರನು ಸದೆಬಡಿಯಲಿ //
5 : ಆತನು ಬಾಳಲಿ ಆಚಂದ್ರಾರ್ಕನಾಗಿ / ತಲತಲಾಂತರಕು ಭಯಭಕುತಿಯಿಂದಿರಲಿ //
6 : ಹುಲ್ಲುಕೊಯ್ದ ಹೊಲದ ಮೇಲೆ ಸುರಿವ ವೃಷ್ಟಿಯಂತೆ / ಬರಲಿ ಆತ ಒಣನೆಲವ ತೋಯ್ವ ಹದ ಮಳೆಯಂತೆ //
7 : ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ / ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ //
8 : ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ / ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ //
9 : ಅರಣ್ಯವಾಸಿಗಳು ಅರಸನಿಗೆ ಅಡ್ಡಬೀಳಲಿ / ಆತನ ಕಡುವೈರಿಗಳು ನೆಲದ ಮಣ್ಣುಮುಕ್ಕಲಿ //
10 : ಕಷ್ಟಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು / ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು //
11 : ರಾಜರುಗಳು ಸಾಷ್ಟಾಂಗವೆರಗಲಿ ಆತನಿಗೆ / ರಾಷ್ಟ್ರ, ಘನರಾಷ್ಟ್ರಗಳು ಸೇವೆಸಲ್ಲಿಸಲಿ ಆತನಿಗೆ //
12 : ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು / ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು //
13 : ದೀನದರಿದ್ರರಿಗೆ ದಯೆಯ ತೋರುವನು / ದಲಿತರ ಪ್ರಾಣವನು ಕಾಪಾಡುವನು //
14 : ಅವರ ಜೀವ ಆತನ ದೃಷ್ಟಿಯಲಿ ಅಮೂಲ್ಯ / ಜುಲುಮೆ ಶೋಷಣೆಗಳ ನೀಗಿಪುದು ಆತನ ಕಾರ್ಯ //
15 : ಅರಸ ಬಾಳಲಿ ಚಿರಕಾಲ; ದೊರಕಲಿ ಆತನಿಗೆ ಶೆಬಾದ ಬಂಗಾರ / ಜರುಗಲಿ ಪ್ರಾರ್ಥನೆ ಸದಾಕಾಲ; ಆಶೀರ್ವಾದ ಸಿಗಲಿ ಅನವರತ //
16 : ಸಮೃದ್ಧಿಯಾಗಲಿ ನಾಡಿನ ದವಸಧಾನ್ಯ ನೆಲಮಲೆಗಳ ಮೇಲೆ / ಸೊಂಪಾಗಲಿ ಅದರ ಹಣ್ಣುಹಂಪಲು ಲೆಬನೋನಿನ ಮರಗಳಂತೆ / ಹುಲುಸಾಗಲಿ ನಗರ ನಿವಾಸಿಗಳ ಸಂಖ್ಯೆ ಬಯಲಿನ ಹುಲ್ಲಿನಂತೆ //
17 : ಶಾಶ್ವತವಾಗಲಿ ಶ್ರೀನಾಮ ಆತನಿಗೆ / ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ / ಆತನಾಶೀರ್ವಾದ ಕೋರಲಿ ಸರ್ವರು ತಮಗೆ / ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ //
18 : ಸುತ್ಯರ್ಹನು ಸ್ವಾಮಿದೇವನು, ಇಸ್ರಯೇಲರ ದೇವನು / ಆತನೋರ್ವನೇ ಮಹತ್ಕಾರ್ಯಗಳನು ಎಸಗುವಂತವನು //
19 : ಮಹಿಮಾಯುಕ್ತ ಆತನ ನಾಮಕೆ ಸದಾ ಕಾಲವು ಸ್ತುತಿ / ಆಮೆನ್ ಆಮೆನ್ ಭೂಮಂಡಲವೆಲ್ಲಾ ಆತನ ಪ್ರಭಾವ ಪೂರ್ತಿ /
20 : ಇತಿ, ಜೆಸ್ಸೆಯನ ಕುವರ ದಾವೀದನ ಪ್ರಾರ್ಥನೆಗಳ ಸಮಾಪ್ತಿ /

· © 2017 kannadacatholicbible.org Privacy Policy