Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಆಶ್ರಯಕೋರಿ ಹೇ ಪ್ರಭು, ನಾ ಬಂದಿರುವೆ / ಆಶಾಭಂಗವಾಗದಿರಲೆಂದು ನಾ ಬೇಡುವೆ //
2 : ಸತ್ಯಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಯ್ಯಾ / ನನಗೆ ಕಿವಿಗೊಟ್ಟು ಪ್ರಭು ನನ್ನನುದ್ಧರಿಸಯ್ಯಾ //
3 : ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು / ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು //
4 : ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯಾ / ಕ್ರೂರ ಕೇಡಿಗರ ವಂಶದಿಂದೆನ್ನನು ತಪ್ಪಿಸಯ್ಯಾ //
5 : ಸ್ವಾಮಿ ದೇವಾ, ನೀನೇ ನನ್ನ ಭರವಸೆ / ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ //
6 : ಹುಟ್ಟಿನಿಂದಲೆ ನಾ ನಿನಗಂಟಿ ಕೊಂಡಿರುವೆನಯ್ಯಾ / ಗರ್ಭದಿಂದಲೆ ನೀ ಎನ್ನನು ಕರೆದುತಂದೆಯಯ್ಯಾ / ನಿರಂತರವೂ ನಿನ್ನನು ಕೊಂಡಾಡುತ್ತಿರುವೆನಯ್ಯಾ //
7 : ಹಲವರಿಗೆ ನಾನೊಂದು ಒಗಟು / ನೀನೆನಗೆ ಬಲವಾದ ನೆಲೆಗಟ್ಟು //
8 : ನಿನ್ನ ಗುಣಗಾನ ನನ್ನ ಬಾಯ್ತುಂಬ / ನಿನ್ನ ಘೋಷಣೆ ನನಗೆ ದಿನವಾದ್ಯಂತ //
9 : ವೃದ್ಧಾಪ್ಯದಲಿ ನನ್ನ ತಳ್ಳಿ ಬಿಡಬೇಡಯ್ಯಾ / ಶಕ್ತಿ ಕುಂದುತ್ತಿರುವಾಗ ಕೈ ಬಿಡಬೇಡಯ್ಯಾ //
10 : ನನಗೆದುರಾಗಿ ಶತ್ರುಗಳಾಲೋಚಿಸುತಿ ಹರಯ್ಯಾ / ನನ್ನ ಕೊಲೆಗಾಗಿ ಒಂದುಗೂಡಿ ಹೊಂಚಿಸುತಿಹರಯ್ಯಾ //
11 : “ಹಿಡಿಯಿರಿ ಬೆನ್ನಟ್ಟಿ, ದೇವನವನನ್ನು ಕೈಬಿಟ್ಟಿಹನು / ರಕ್ಷಿಸುವಂಥವರಾರು ಇನ್ನಿಲ್ಲ” ಎನ್ನುತಿಹರು //
12 : ಓ ದೇವಾ, ದೂರವಾಗಿರಬೇಡಯ್ಯಾ / ನೆರವಾಗಲು ಬೇಗ ತ್ವರೆಮಾಡಯ್ಯಾ //
13 : ಆಶಾಭಂಗವು ದಹಿಸಿಬಿಡಲಿ ನನ್ನ ಪ್ರಾಣ ಕಂಟಕರನು / ನಿಂದಾಪಮಾನ ಕವಿದುಬಿಡಲಿ ನನಗೆ ಕೇಡು ಬಗೆವವರನು //
14 : ನಾನಂತು ನಂಬಿರುವೆ ನಿನ್ನ ನಿರಂತರವಾಗಿ / ನಿನ್ನನು ಕೀರ್ತಿಸುತ್ತಿರುವೆ ಅಧಿಕಾಧಿಕವಾಗಿ //
15 : ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು / ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು //
16 : ಸ್ವಾಮಿ ದೇವಾ, ಸ್ಮರಿಸುವೆನು ನಿನ್ನ ಮಹತ್ಕಾರ್ಯಗಳನೆ / ಪ್ರಕಟಪಡಿಸುವೆನು ನಿನ್ನೊಬ್ಬನ ನ್ಯಾಯನೀತಿಯನೆ //
17 : ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ?/ ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ //
18 : ದೇವಾ, ನರೆಯ ಮುದುಕನಾಗಿರುವಾಗ ನನ್ನ ಕೈ ಬಿಡಬೇಡಯ್ಯಾ / ನಿನ್ನ ಪರಾಕ್ರಮವನು ಮುಂದಿನ ಪೀಳಿಗೆಗೆ ಸಾರುವತನಕ ಬೇಡವಯ್ಯಾ / ನಿನ್ನ ಪ್ರತಾಪವನು ತಲತಲಾಂತರದವರೆಗೆ ಪ್ರಕಟಿಸುವೆನಯ್ಯಾ //
19 : ನಿನ್ನ ಶಕ್ತಿ, ನಿನ್ನ ನೀತಿ ದೇವಾ, ಗಗನ ಮುಟ್ಟುತ್ತಿಹವು / ಮಹತ್ಕಾರ್ಯಗಳೆಸಗಿದ ನಿನಗೆ ದೇವಾ, ಯಾರು ಸಾಟಿಯು? //
20 : ದೇವಾ, ಈಡು ಮಾಡಿದೆಯೆನ್ನನು ಕಷ್ಟ ಸಂಕಟಗಳಿಗೆ / ಪುನಶ್ಚೇತನಗೊಳಿಸೀಗ, ಭೂತಳದಿಂದೆತ್ತು ಮೇಲಕೆ //
21 : ನನ್ನ ಗೌರವವನು ಅಧಿಕರಿಸಯ್ಯಾ / ಮರಳಿ ನೆಮ್ಮದಿಯನು ಪಾಲಿಸಯ್ಯಾ //
22 : ನಿನ್ನ ಸತ್ಯತೆಗಾಗಿ ಓ ಎನ್ನ ದೇವಾ / ಕಿನ್ನರಿಯನು ನುಡಿಸುತಾ ಭಜಿಸುವೆನಯ್ಯಾ // ಇಸ್ರಯೇಲಿನ ಆ ಪರಮಪಾವನ ಸ್ವಾಮಿಯ / ವೀಣೆವಾದ್ಯದೊಂದಿಗೆ ಕೀರ್ತಿಸುವೆನಯ್ಯಾ //
23 : ಮಧುರದನಿಗೈವುದು ಎನ್ನಧರ ನಿನ್ನ ಗುಣಗಾನದಲಿ / ನೀನುದ್ಧರಿಸಿದ ಎನ್ನ ಮನ ಭಾಗಿಯಾಗುವುದಾ ಗಾನದಲಿ //
24 : ನನಗೆ ಕೇಡು ಬಗೆದವರಿದೋ ಪಡೆದರು ನಿಂದೆ ಅಪಮಾನವನು / ದಿನವೆಲ್ಲ ವರ್ಣಿಪುದೆನ್ನ ನಾಲಿಗೆ ನಿನ್ನೀ ನೀತಿಸಾಧನೆಯನು //

· © 2017 kannadacatholicbible.org Privacy Policy