Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ನಿನ್ನಾಶ್ರಯವನರಸಿ ಹೇ ಸ್ವಾಮಿ ದೇವಾ, ನಾ ಬಂದಿಹೆನು / ಬೆನ್ನಟ್ಟಿ ಬರುವವರ ಕೈಯಿಂದ ತಪ್ಪಿಸಿ, ಕಾಪಾಡೆನ್ನನು //
2 : ಇಲ್ಲದಿರೆ ಶತ್ರು ತಿಳಿದಾನು ನನಗೆ ರಕ್ಷಕನಿಲ್ಲವೆಂದು / ಝಲ್ಲನೆ ಸೀಳಿಬಿಟ್ಟಾನು ಸಿಂಹದಂತೆ ಮೇಲೆಬಿದ್ದು //
3 : ಸ್ವಾಮಿ ದೇವಾ, ನಾನೀಪರಿ ನಡೆದಿರೆ : ಅಕ್ರಮಕ್ಕೆ ಕೈ ಹಾಕಿರೆ /
4 : ಮಿತ್ರದ್ರೋಹಿ ಆಗಿರೆ, ನಿಷ್ಕಾರಣ ಶತ್ರು ಸುಲಿಗೆ ಮಾಡಿರೆ /
5 : ಎನ್ನ ಬೆನ್ನಟ್ಟಿ ಬರಲಿ ವೈರಿ, ಕಾಲಿಂದೆನ್ನ ಮೆಟ್ಟಿ ತುಳಿಯಲಿ / ಎನ್ನ ಮಾನವನು ಮಣ್ಣು ಪಾಲಾಗಿಸಲಿ, ನನ್ನನು ಸೋಲಿಸಿಬಿಡಲಿ //
6 : ಹೇ ಪ್ರಭು, ಎಚ್ಚರಗೊಳ್ಳು : ನ್ಯಾಯವನು ದೇವಾ, ನಿರ್ಣಯಿಸು / ಕೋಪದಿಂದೆದ್ದು ವಿರೋಧಿಗಳ ಕ್ರೋಧವನು ಭಂಗಪಡಿಸು //
7 : ಸಭೆಸೇರಲಿ ಸಕಲ ಜನಾಂಗಗಳು ನಿನ್ನ ಸುತ್ತಲು / ನೀ ಆಸ್ಥಾನವನೇರು, ಅವರನು ಪರಿಪಾಲಿಸಲು //
8 : ಹೇ ಪ್ರಭು, ಜಗದ ಜನಾಂಗಕೆ ನ್ಯಾಯ ದೊರಕಿಸುವವನು ನೀನು / ನನಗೂ ನ್ಯಾಯ ದೊರಕಿಸು: ನಿರಪರಾಧಿ, ನೀತಿವಂತ ನಾನು //
9 : ಮಾನವರ ಹೃನ್ಮನವನರಿತಿಹ ಸತ್ಯ ಸ್ವರೂಪಿ ದೇವಾ, / ದುರುಳರ ಕೆಡುಕನಳಿಸಯ್ಯಾ, ಸತ್ಯವಂತರನು ನೀ ಉಳಿಸಯ್ಯಾ /
10 : ನನಗೆ ರಕ್ಷೆನೀಡುವ ಗುರಾಣಿ, ದೇವನೇ / ನೇರಮನಸ್ಸರಿಗೆ ಸಂರಕ್ಷಣೆ ಆತನೆ //
11 : ನ್ಯಾಯಕ್ಕನುಸಾರ ತೀರ್ಪನಿಡುವಂಥವನು ದೇವನು / ದುರುಳರ ಮೇಲೆ ದಿನಬಿಡದೆ ಕೋಪವುಳ್ಳವನು ಆತನು //
12 : ತೀಡುವನು ಕತ್ತಿಯನು, ಹೂಡುವನು ಬಾಣವನು / ಪಡೆಯದಿರೆ ದುರುಳನು ಮನ ಪರಿವರ್ತನೆಯನು //
13 : ಸೇರಿಸಿಟ್ಟಿರುವನಾತ ಮಾರಕಾಸ್ತ್ರಗಳನು / ಗುರಿಯಿಟ್ಟು ನಿಂತಿರುವನು ಅಗ್ನಿಬಾಣಗಳನು //
14 : ಕೇಡನು ಹಡೆಯಲು ದುರುಳನು ಪಡುವ ಬೇನೆಯನು ನೋಡು / ಹಾನಿಯ ಹಡೆವನೆಂದೆಣಿಸಿ ಶೂನ್ಯವ ಹೆರುವುದ ನೋಡು //
15 : ಗುಣಿಯನು ತೋಡಿದನು; ಮಣ್ಣನು ಹೊರದೂಡಿದನು / ತೋಡಿದ ಗುಣಿಯಲಿ ತಾನೆ ತಟ್ಟನೆ ಬೀಳುವನು //
16 : ತಾನು ಮಾಡಿದ ಕುತಂತ್ರ ತನ್ನ ತಲೆಗೆ ಗಂಡಾಂತರ / ತಾನು ಕೊಟ್ಟ ಉಪದ್ರವ ತನ್ನ ಬುರುಡೆಗೆ ಅವಾಂತರ //
17 : ಸತ್ಯ ಸ್ವರೂಪನಾದ ಸ್ವಾಮಿಗೆ ನನ್ನ ವಂದನೆ / ಪರಾತ್ಪರ ಪ್ರಭುವಿನ ನಾಮಕ್ಕೆ ಸ್ತುತಿ ಸಂಕೀರ್ತನೆ //

· © 2017 kannadacatholicbible.org Privacy Policy