1 : ಕಿವಿಗೊಡು ದೇವಾ, ನನ್ನಾತ್ಮದ
ಮೊರೆಗೆ /
ಕಾಪಾಡು, ಶತ್ರುಗಳ ಭಯವಿದೆ ನನಗೆ //
2 : ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ /
ಕಾದಿರಿಸೆನ್ನ ದುರುಳರ ದೊಂಬಿಯಿಂದ //
3 : ನಾಲಗೆಯೆಂಬ ಅಲಗನವರು ಮಸೆದಿಹರು /
ನಂಜುಮಾತೆಂಬ ಅಂಬನು ಹೂಡಿಹರು //
4 : ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು
ನಿರಪರಾಧಿಗಳನೆ /
ಅಂಜದೇ ಅಳುಕದೆ ಎಸೆವರು ಬಾಣಗಳನು
ತಟ್ಟನೆ //
5 : ಕೆಟ್ಟದನು ಮಾಡಲು
ಮನದಟ್ಟುಮಾಡಿಕೊಂಡಿಹರು |
“ಗುಟ್ಟಾಗಿಡೋಣ ಉರುಲು, ಕಾಂಬರಾರು?”
ಎನ್ನುತಿಹರು?||
6 : ಅವರು ಹೂಡಿರುವುದು ಕುತಂತ್ರವನು /
ಕೊಚ್ಚಿಕೊಳ್ವುದು ಚತುರೋಪಾಯವನು /
ಅಶೋಧ್ಯ ಮಾನವನ ಹೃನ್ಮನಗಳು!//
7 : ಆದರೆ ಎಸೆವನು ಬಾಣವನು ದೇವನೆ / ಪಡೆವರು ಅಪಘಾತವನು ಫಕ್ಕನೆ //
8 : ನಾಲಿಗೆ ನಿಮಿತ್ತ ಅವರು
ಅವನತಿಗೀಡಾಗುವರು /
ನೋಡುವವರೆಲ್ಲರು ತಲೆಯಾಡಿಸಿ
ಅಣಕಿಸುವರು //
9 : ಜನರೆಲ್ಲರಾಗ ತಲ್ಲಣಗೊಳ್ಳುವರು /
ದೇವಕಾರ್ಯವಿದು ಎಂದು ಧ್ಯಾನಿಪರು /
ಆತನ ಸತ್ಕಾರ್ಯಗಳನು ಸಾರುವರು //
10 : ಹರ್ಷಿಸಲಿ ಸಜ್ಜನರು ಪ್ರಭುವಿನಲಿ /
ಆಶ್ರಯ ಪಡೆಯಲೀಗಲೆ ಆತನಲಿ /
ನೇರ ಹೃದಯಿಗಳೆಲ್ಲರು ಹಿಗ್ಗಲಿ //