Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಶತ್ರುಗಳಿಂದ ದೇವಾ, ತಪ್ಪಿಸು / ಎದುರಾಳಿಗಳಿಂದೆನ್ನ ರಕ್ಷಿಸು //
2 : ಕೇಡಿಗರಿಂದೆನ್ನ ಬಿಡಿಸು / ಕೊಲೆಪಾತಕರಿಂದ ಉಳಿಸು //
3 : ಇಗೋ ನನ್ನ ಪ್ರಾಣಕ್ಕವರು ಹೂಡಿರುವ ಹೊಂಚು / ನನ್ನ ಮೇಲೆರಗಲು ಹೂಡಿರುವ ಕ್ರೂರಿಗಳ ಸಂಚು //
4 : ನಿರಪರಾಧಿ, ನಿರ್ದೋಷಿ ನಾನಾದರು / ಮೇಲೆ ಬೀಳಲಿದೋ ಸಜ್ಜುಗೊಂಡಿಹರು / ಎಚ್ಚೆತ್ತು ಪ್ರಭು, ನನಗೆ ನೆರವಾಗಿರು //
5 : ಇಸ್ರಯೇಲರ ದೇವ, ಸೇನಾಧೀಶ್ವರ ಪ್ರಭು, ನೀನು / ದಂಡಿಸು ನೀನೆಚ್ಚರಗೊಂಡು ಅನ್ಯ ಜನರೆಲ್ಲರನು / ತೋರಬೇಡ ದುರುಳ ದ್ರೋಹಿಗಳಾರಿಗೂ ದಯೆಯನು //
6 : ಸಂಜೆಯಾದುದೆ ಓಡಿ ಬರುವರು ನಾಯಿಗಳಂತೆ // ಗುರುಗುಟ್ಟುತ ಊರ ಸುತ್ತುವರು ಕುನ್ನಿಗಳಂತೆ //
7 : ಅವರ ಬಾಯಿ ಬೊಗಳುವ ಮಾತುಗಳನು ಕೇಳು / ಅವರ ತುಟಿಗಳು ಹರಿತ ಕತ್ತಿಕಠಾರಿಗಳು / ನಮಗಾರು ಕಿವಿಗೊಡರೆಂಬುದೆ ಅವರ ಗೋಳು //
8 : ನೀನಾದರೋ ಪ್ರಭು, ಅವರನು ನೋಡಿ ನಗುವೆ / ಅನ್ಯ ಜನರನು ಅಪಹಾಸ್ಯಕ್ಕೀಡು ಮಾಡುವೆ //
9 : ನನ್ನ ಶಕ್ತಿಯೇ, ನಿನಗಾಗಿ ನಾ ಕಾದಿರುವೆ / ನನ್ನಾಶ್ರಯ ದುರ್ಗ, ದೇವಾ, ನೀನೇ ಅಲ್ಲವೆ?//
10 : ಪ್ರೀತಿಯಿಂದ ನೆರವಾಗುವನು ದೇವನೆನಗೆ / ಶತ್ರುಗಳಿಗಾದ ಸೋಲನು ತೋರಿಸುವನೆನಗೆ //
11 : ಕೊಲಬೇಡಾ ದ್ರೋಹಿಗಳನು ಫಕ್ಕನೆ / ಮರೆತಾರೆನ್ನ ಜನತೆ ಪಾಠ ಕಲಿಯದೆ // ಚದರಿಸು ಶಕ್ತಿಯಿಂದ, ಅಲೆಯಲಿ ದಿಕ್ಕು ತೋಚದೆ / ಈ ಪರಿ ತಗ್ಗಿಸು ಅವರನು; ಪ್ರಭು, ನೀಡೆನಗೆ ರಕ್ಷೆ //
12 : ಪಾಪವಿದೆ ಬಾಯಲಿ, ದೋಷವಿದೆ ತುಟಿಯಲಿ / ಸುಳ್ಳಿದೆ ಮಾತಲಿ, ಶಾಪವಿದೆ ನುಡಿಯಲಿ / ಅವರ ಸೊಕ್ಕಿನಲಿ ಅವರೇ ಸಿಕ್ಕ ಬೀಳಲಿ //
13 : ಸುಟ್ಟು ನೀ ಭಸ್ಮಮಾಡು ಕೋಪಾಗ್ನಿಯಿಂದ / ಸ್ಪಷ್ಟವಾಗಲಿ ಇಡೀ ಲೋಕಕ್ಕಿದರಿಂದ / ದೇವನಾಳುತಿಹನೆಂದು ಇಸ್ರಯೇಲಿನಿಂದ //
14 : ಸಂಜೆಯಾದುದೆ ಓಡಿ ಬರುವರು ನಾಯಿಗಳಂತೆ / ಗುರುಗುಟ್ಟುತ ಊರ ಸುತ್ತುವರು ಕುನ್ನಿ ಗಳಂತೆ //
15 : ಅನ್ನಕ್ಕಾಗಿ ಅಲೆದಾಡುವರು ಅತ್ತಿತ್ತಾ / ಹೊಟ್ಟೆತುಂಬದಿರೆ ಅಡ್ಡಾಡುವರು ಬೊಗಳುತ್ತಾ //
16 : ನಾನಾದರೊ ಹೊಗಳಿ ಹಾಡುವೆ ದೇವಾ, ನಿನ್ನ ಸಾಮಥ್ರ್ಯವನು / ಉದಯಕಾಲದಲೆ ನಾ ಸಂಕೀರ್ತಿಸುವೆ ನಿನ್ನ ಪ್ರೀತಿ ಪ್ರೇಮವನು / ಸಂಕಟದಲ್ಲೆನಗಾದ ಆಶ್ರಯಗಿರಿ, ದುರ್ಗ, ನಿನಲ್ಲವೇನು?//
17 : ನೀನೆನ್ನ ಶಕ್ತಿದೇವಾ, ನಿನಗೆನ್ನ ಸ್ತುತಿ / ನೀನೆನ್ನ ದುರ್ಗ, ತೋರಿಸು ಎನಗೆ ಪ್ರೀತಿ //

· © 2017 kannadacatholicbible.org Privacy Policy