1 : ಜನನಾಯಕರೇ, ನ್ಯಾಯಬದ್ಧವೊ
ನಿಮ್ಮ ತೀರ್ಪುಗಳು?/
ವ್ಯಾಜ್ಯಗಳನು ಬಗೆಹರಿಸುತ್ತವೆಯೆ ನಿಮ್ಮ
ನಿರ್ಣಯಗಳು?//
2 : ಬದಲಿಗೆ ಕಲ್ಪಿಸುತ್ತೀರಿ ಅಕ್ರಮವನು ಮನದಲಿ /
ಧರೆಗೀಯುತ್ತೀರಿ ಹಿಂಸಾಚಾರವನು
ತೂಕದಲಿ //
3 : ದುರುಳರು ದಾರಿತಪ್ಪಿದವರು ಉದರದಿಂದಲೆ /
ಸಟೆಯಾಡುವ ಅಕ್ರಮಿಗಳವರು
ಹುಟ್ಟಿನಿಂದಲೆ //
4 : ಸರ್ಪಗಳಂತಾ ಜನ ವಿಷಭರಿತ /
ನಾಗರದಂತೆ ಅವರ ಕಿವಿ ಮಂದ //
5 : ಒಲಿಯದವರ ಕಿವಿ
ಪುಂಗಿಯ ನಾದಕೆ /
ಮಣಿಯವು ಹಾವಾಡಿಗನ ಮಾಟಕೆ //
6 : ಮುರಿದುಬಿಡು ಹೇ ದೇವಾ, ಆ ದುರುಳರ
ಹಲ್ಲುಗಳನು /
ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ
ಕೋರೆಗಳನು //
7 : ಅವರಾಗಲಿ ಬೇಗನೆ ಕಾಣದೆ ಹೋಗುವ
ತೊರೆಯಂತೆ /
ನಸುಕಿ ನಾಶವಾಗಲಿ ಪಾದದಡಿ ಸಿಲುಕಿದ
ಗರಿಕೆಕಣದಂತೆ //
8 : ನುಸುಳಿ ನುಸುಳಿ ನಶಿಸಿಹೋಗಲಿ ಬಸವನ
ಹುಳದಂತೆ /
ರವಿಯ ಬೆಳಕನು ಕಾಣದಿರಲಿ ಗರ್ಭವಿಳಿದ
ಪಿಂಡದಂತೆ //
9 : ಹಸುರಿರಲಿ ಒಣಗಿರಲಿ, ಒಲೆ ಪಾಲಾಗಲಿ
ಮುಳ್ಳಿನಂತೆ /
ನಿಶ್ಯೇಷವಾಗಲಿ ದೇವಕೋಪಾಗ್ನಿಗೆ
ಸಿಲುಕಿದಂತೆ //
10 : ನಲಿವರು ಸಜ್ಜನರು ಈ ಪ್ರತೀಕಾರ ನೋಟದಲಿ /
ಕಾಲುತೊಳೆಯುವರವರು ಆ ದುರ್ಜನರ
ನೆತ್ತರಲಿ //
11 : “ನ್ಯಾಯ ನಿರ್ಣಯಿಸುವಂಥ ದೇವನಿಹನು
ಜಗದಲಿ |
ಸಜ್ಜನರಿಗೆ ಸತ್ಫಲ ಕಟ್ಟಿಟ್ಟ ಬುತ್ತಿ”
ಇದು ನಾಣ್ನುಡಿ||