1 : ಹೇ ದೇವಾ, ಕಿವಿಗೊಡು ನನ್ನ
ಪ್ರಾರ್ಥನೆಗೆ /
ವಿಮುಖನಾಗಬೇಡ ನನ್ನ ವಿಜ್ಞಾಪನೆಗೆ //
2 : ನನ್ನ ಮನವಿಯನಾಲಿಸು, ದಯಪಾಲಿಸು
ಸದುತ್ತರವನು /
ಚಿಂತಾಕ್ರಾಂತನಾದ ನಾನು
ಪ್ರಲಾಪಿಸುತ್ತಿರುವೆನು //
3 : ಶತ್ರುಗರ್ಜನೆಯಿಂದ, ದುರುಳರ ಹಿಂಸೆಯಿಂದ /
ಅವರೆನಗೆ ಬರಮಾಡಿರುವ ಆತಂಕದಿಂದ /
ದ್ವೇಷಿಸುತಿಹರೆನ್ನನು ಕೋಪಾವೇಶದಿಂದ //
4 : ನನ್ನ ಹೃದಯವು ನೊಂದು ಬೆಂದಿದೆ /
ಮರಣ ಭಯವು ಆವರಿಸಿಕೊಂಡಿದೆ //
5 : ನಡುಗುತ್ತಿರುವೆ ಭಯದಿಂದ /
ಕುಸಿಯುತ್ತಿರುವೆ ದಿಗಿಲಿನಿಂದ //
6 : ‘ಆಹಾ ರೆಕ್ಕೆಗಳು ನನಗಿತ್ತಾದರೆ
ಪಾರಿವಾಳದಂತೆ /
ಹಾರಿ ಹೋಗಿ ನೆಮ್ಮದಿಯಿಂದಿರಬಹುದಿತ್ತು’
ಎನ್ನುತ್ತಿದ್ದೆ//
7 : ದೂರ, ಬಲುದೂರ ಹಾರಿ ಹೋಗುತ್ತಿದ್ದೆ /
ನಿರ್ಜನ ಪ್ರದೇಶದಲಿ ವಾಸಿಸುತ್ತಿದ್ದೆ //
8 : ಹುಡುಕುತ್ತಿದ್ದೆ ನಾ ಗೂಡನು ತವಕದಿಂದ /
ಪಾರಾಗುತ್ತಿದ್ದೆ ಬಿರುಗಾಳಿ ಮಳೆಯಿಂದ //
9 : ಭ್ರಾಂತಗೊಳಿಸು ಶತ್ರುವನು, ಗಲಿಬಿಲಿಗೊಳಿಸು
ಅವರ ನುಡಿಯನು /
ನಗರದಲಿ ನಾ ಕಾಣುತ್ತಿರುವೆ ಪ್ರಭೂ, ಹಿಂಸೆ
ಕಲಹವನು //
10 : ಗೋಡೆ ಸುತ್ತಲೂ ತಿರುಗುತಿಹರವರು
ಹಗಲಿರುಳು /
ನಗರದೊಳಗೆ ತುಂಬಿವೆ ಅಕ್ರಮ
ಅನಾಚಾರಗಳು //
11 : ಅದರ ಮಧ್ಯೆಯೇ ಇವೆ ವಿನಾಶಕರ ಶಕ್ತಿಗಳು / ಅದರ ಬೀದಿಬಿಟ್ಟು ತೊಲಗವು ಮೋಸ ವಂಚನೆಗಳು //
12 : ನಾ ಸಹಿಸಿಕೊಳ್ಳುತ್ತಿದ್ದೆ ದೂಷಿಸುವವನು
ಶತ್ರುವಾಗಿದ್ದರೆ /
ನಾನವಿತುಕೊಳ್ಳುತ್ತಿದ್ದೆ ದ್ವೇಷಿಸುವವನು
ವೈರಿಯಾಗಿದ್ದರೆ //
13 : ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು /
ನನಗೆ ಸರಿಯಾದವನು, ಗೆಳೆಯನು, ನನ್ನಾಪ್ತ
ಮಿತ್ರನು //
14 : ತೆರಳಲಿಲ್ಲವೆ ನಾವೀರ್ವರು ದೇವಾಲಯಕೆ /
ಭಕ್ತರೊಂದಿಗೆ ಮಧುರ
ಸಂಭಾಷಣೆಯೊಂದಿಗೆ?//
15 : ಮರಣ ತಟ್ಟನೆ ಆ ದುಷ್ಟರ ಮೇಲೆರಗಲಿ /
ಜೀವಸಹಿತ ಪಾತಾಳಕ್ಕವರು ಇಳಿಯಲಿ /
ಕೆಟ್ಟತನ ಮನೆಮಾಡಿದೆ ಅವರ ಮಧ್ಯದಲಿ //
16 : ನಾನಾದರೋ ಮೊರೆಯಿಡುವೆ ದೇವರಿಗೆ /
ರಕ್ಷಣೆ ನೀಡದಿರನು ಪ್ರಭು ನನಗೆ //
17 : ತ್ರಿಕಾಲದೊಳು ಗೋಗರೆದು ಯಾಚಿಸುವೆನು /
ಎನ್ನಯ ಮೊರೆಗಾತನು ಕಿವಿಗೊಡದಿರನು //
18 : ನನ್ನ ಸುತ್ತಲೂ ಶತ್ರುವ್ಯೂಹವಿರುವಲ್ಲಿ /
ರಕ್ಷಿಸುವನೆನ್ನನು ನಾ ನಡೆಸುವ ದಾಳಿಯಲಿ //
19 : ಆದಿಯಿಂದಾಳುವ ದೇವನು ಅವರ
ಸೊಕ್ಕಡಗಿಸದೆ ಬಿಡನು /
ಪರಿವರ್ತಿಸಲಾಗದು ದೇವಭಯವಿಲ್ಲದವರ
ಹೃದಯವನು //
20 : ಮಿತ್ರರ ಮೇಲೆ ಕೈಯೆತ್ತಿರುವನು ಆ ನನ್ನ
ಗೆಳೆಯನು /
ತಾನು ಮಾಡಿದ ಒಪ್ಪಂದವನು ತಾನೆ ವಿೂರಿ
ನಡೆದಿಹನು //
21 : ಅವನ ಬಾಯಿ ಬೆಣ್ಣೆಗಿಂತ ನಯ, ಆದರೆ
ಹೃದಯ ಕಲಹಭರಿತ /
ನುಡಿ ಎಣ್ಣೆಗಿಂತ ನುಣುಪು, ಆದರೆ
ಬಿಚ್ಚುಗತ್ತಿಗಿಂತ ಹರಿತ //
22 : ಪ್ರಭುವಿನ ಮೇಲೆ ಹಾಕು ನಿನ್ನ
ಚಿಂತಾಭಾರವನು /
ಉದ್ಧರಿಸುವನು, ಸಜ್ಜನರನೆಂದಿಗೂ
ಕದಲಗೊಡಿಸನು //
23 : ದುರ್ಜನರನು ದೇವಾ, ನೀ ದಬ್ಬಿಬಿಡುವೆ
ಪಾತಾಳಕೆ /
ಅರ್ಧಾಯುಷ್ಯವನೂ ಬಾಳಬಿಡೆ ವಂಚಕ
ಕೊಲೆಗಾರರಿಗೆ /
ನಾನಾದರೋ ಓ ದೇವಾ, ನೆಮ್ಮಿಗೊಂಡಿರುವೆ
ನಿನಗೆ //