1 : ಕೃಪಾಳು, ದೇವಾ, ಕರುಣಿಸೆನ್ನನು /
ಕರುಣಾನಿಧಿ, ಅಳಿಸೆನ್ನ
ದೋಷವನು //
2 : ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು /
ದೋಷಪರಿಹರಿಸಿ ಶುದ್ಧಗೊಳಿಸೆನ್ನನು //
3 : ಒಪ್ಪಿಕೊಂಡೆನಿದೋ, ನಾನೇ ಅಪರಾಧಿ /
ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ //
4 : ಹೌದು ದೇವಾ, ನಿನಗೆ ದ್ರೋಹವೆಸಗಿದೆ /
ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ //
ನಿನ್ನ ನಿರ್ಣಯವು ನ್ಯಾಯಯುತ /
ನೀ ನೀಡುವ ತೀರ್ಪು ನಿರ್ಲಿಪ್ತ //
5 : ನಾ ಜನಿಸಿದೆ ಪಾಪಪಂಕದಲೆ /
ದ್ರೋಹಿ ನಾ ಮಾತೃಗರ್ಭದಿಂದಲೆ //
6 : ಅಂತರಂಗ ಶುದ್ಧಿಯನು ನೀ ಬಯಸುತಿ / ಅಂತರ್ಯ ಜ್ಞಾನವನು ಉದಯಗೊಳಿಸುತಿ //
7 : ಹಿಸ್ಸೋಪಿನಿಂದ ನೀ ಚಿಮುಕಿಸೆ, ನಾ
ಶುದ್ಧನಾಗುವೆ /
ನೀ ತೊಳೆದೆಯಾದರೆ, ಹಿಮಕ್ಕಿಂತ ನಾ
ಬೆಳ್ಳಗಾಗುವೆ //
8 : ಹರ್ಷಾನಂದವನು ಮೊಳಗಿಸೆನ್ನೊಳು /
ಪುಳಕಗೊಳ್ಳುವುವು ನೀ ಮುರಿದೆಲುಬುಗಳು //
9 : ನನ್ನ ಪಾಪದೋಷಕೆ ವಿಮುಖನಾಗು /
ಸರ್ವ ದ್ರೋಹಗಳನು ಅಳಿಸಿಹಾಕು //
10 : ಶುದ್ಧ ಹೃದಯವನು ದೇವಾ, ನಿರ್ಮಿಸು /
ಅಂತರಂಗವನು ಚೇತನಗೊಳಿಸು //
11 : ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ /
ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ //
12 : ಜೀವೋದ್ಧಾರವನು ಮರಳಿ
ಸವಿಯುವಂತೆ ಮಾಡು /
ವಿಧೇಯನಾಗಿ ನಡೆವ ಸಿದ್ಧ ಮನಸ್ಸನು ನೀಡು //
13 : ಬೋಧಿಸುವೆನಾಗ ನಿನ್ನ ಮಾರ್ಗವನು
ದುರುಳರಿಗೆ /
ತಿರುಗಿಕೊಳ್ವರಾಗ ದ್ರೋಹಿಗಳು ನಿನ್ನ ಕಡೆಗೆ //
14 : ತಪ್ಪಿಸೆನ್ನನು ಸ್ವಾಮಿ ದೇವಾ,
ರಕ್ತಾಪರಾಧದಿಂದ /
ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತ
ಕಂಠದಿಂದ //
15 : ತೆರೆವಂತೆ ಮಾಡು ಪ್ರಭು ನನ್ನ ತುಟಿಗಳನು /
ಸಾರುವುದೆನ್ನ ಬಾಯಿ ನಿನ್ನ ನುಡಿಗಳನು //
16 : ಬಲಿಯರ್ಪಣೆಯಲಿ ನಿನಗೊಲವಿಲ್ಲ |
ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||
17 : ಮುರಿದ ಮನವೇ ದೇವನೊಲಿವ ಯಜ್ಞವು /
ನೊಂದು ಬೆಂದ ಮನವನಾತ ಒಲ್ಲೆಯೆನನು //
18 : ಸಿಯೋನಿಗೆ ದೇವಾ, ಶುಭವನು ಕರುಣಿಸು /
ಜೆರುಸಲೇಮ್ ಕೋಟೆಯನು ಮರಳಿ
ಎಬ್ಬಿಸು //
19 : ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು /
ವೇದಿಕೆ ಮೇಲೆ ಯಜ್ಞಪಶುಗಳನು
ಅರ್ಪಿಸುವರು //