Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ದೇವಾಧಿದೇವನಾದ ಪ್ರಭುವಿನ ನುಡಿ ಇಡೀ ಜಗಕೆ / ಆತನ ಸನ್ನಿಧಿಗೆ ಕರೆ, ಪೂರ್ವದಿಂದ ಪಶ್ಚಿಮದವರೆಗೆ //
2 : ಸುರ ಸುಂದರವಾದ ಸಿಯೋನಿನಿಂದ / ಉದಯಸಿಹನು ದೇವನು ಶೋಭೆಯಿಂದ //
3 : ಬರುತಿಹನು ನಮ್ಮ ದೇವನು, ಇನ್ನು ಸುಮ್ಮನಿರನಾತ / ಆತನ ಮುಂದೆ ಬೆಂಕಿಮಳೆ, ಸುತ್ತಲು ಚಂಡಮಾರುತ //
4 : ಭೂಮ್ಯಾಕಾಶಗಳನು ಕರೆಯುತಿಹನು / ಪ್ರಜೆಗೆ ವಿಧಿಪಾ ತೀರ್ಪನು ನೋಡಲೆಂದು //
5 : “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು / ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು //
6 : ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ / ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ //
7 : “ಎಲೈ ಪ್ರಜೆ ಇಸ್ರಯೇಲ್, ನಾನು ನಿನ್ನ ದೇವರು / ಕಿವಿಗೊಟ್ಟು ಆಲಿಸು ನಾನು ನಿನ್ನ ವಿರುದ್ಧ ವಾದಿಸುವುದನು //
8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ / ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ //
9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ / ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ //
10 : ಕಾಡಿನಲ್ಲಿರುವ ಮೃಗಜಂತುಗಳೆಲ್ಲ ನನ್ನವೆ / ಗುಡ್ಡದಲಿರುವ ಸಹಸ್ರಾರು ಪಶುಗಳು ನನ್ನವೆ //
12 : ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ / ಜಗವು, ಅದರದೆಲ್ಲವು ನನ್ನವಾಗಿವೆಯಲ್ಲಾ //
13 : ಹೋರಿಗಳ ಮಾಂಸವನು ನಾ ಭುಜಿಸುವುದುಂಟೆ?/ ಹೋತಗಳ ರಕ್ತವನು ನಾ ಕುಡಿಯುವುದುಂಟೇ?//
14 : ದೇವರಿಗೆ ಧನ್ಯವಾದವೆ ನಿನ್ನ ಬಲಿಯರ್ಪಣೆಯಾಗಿರಲಿ / ಪರಾತ್ಪರನಿಗೆ ಮಾಡಿದ ಹರಕೆಗಳು ಸಮರ್ಪಿತವಾಗಲಿ //
15 : ಕಷ್ಟದಲಿ ಮೊರೆಯಿಡೆ, ನೆರವಾಗುವೆ / ಆಗ ನೀ ನನ್ನನು ಕೊಂಡಾಡುವೆ //
16 : ದುರ್ಜನರಿಗೆ ದೇವ ಹೇಳುವನು ಇಂತೆಂದು / “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?/ ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”//
17 : ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ / ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ //
18 : ಕಂಡೊಡನೆ ಬೇಕು ನಿಮಗೆ ಚೋರರ ಕೂಟ / ಸಾಕಾಗಿಲ್ಲ ನಿಮಗೆ ಜಾರರ ಒಡನಾಟ //
19 : ನಿಮ್ಮ ಬಾಯನ್ನಾಳುತ್ತದೆ ಕೆಡುಕುತನ / ನಿಮ್ಮ ನಾಲಿಗೆ ನೇಯುತ್ತದೆ ಕಪಟತನ //
20 : ಸೋದರನಿಗೆ ವಿರುದ್ಧ ಸುಳ್ಳಾಡಲು ಕೂರುತ್ತೀರಿ / ಒಡಹುಟ್ಟಿದವರಿಗೆ ಎದುರಾಗಿ ಚಾಡಿಹೇಳುತ್ತೀರಿ //
21 : ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ?/ ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?// ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು/ ನೀವು ಅಪರಾಧಿಗಳೆಂದು ಸ್ಥಾಪಿಸದೆ ಬಿಡೆನು //
22 : ದೇವನ ನೆನೆಯದವರೇ, ನೀಡಿರಿ ಗಮನವನು / ಇಲ್ಲವಾದರೆ ಛಿನ್ನಛಿನ್ನವಾಗಿಸಿಬಿಟ್ಟೇನು / ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು?//
23 : ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು //

· © 2017 kannadacatholicbible.org Privacy Policy