1 : ಕಿವಿಗೊಡು ಪ್ರಭು, ಎನ್ನ ನುಡಿಗೆ /
ಬಗೆಗೊಡು ಎನ್ನಾತ್ಮದ ಮೊರೆಗೆ //
2 : ಎನ್ನರಸನೇ, ದೇವನೇ /
ಮಾಡುವೆ ನಿನಗೆ ಪ್ರಾರ್ಥನೆ /
ನೀ ಆಲಿಸೆನ್ನ ಯಾಚನೆ //
3 : ಉದಯಕಾಲದಲ್ಲಿ ಪ್ರಭು, ನಿನಗೆ
ಕೇಳಿಬರುವುದು ನನ್ನ ಸ್ವರ /
ಉದಯಾರಾಧನೆ ಮಾಡಿ ಎದುರು
ನೋಡುತ್ತಿರುವೆ ನಾ ಸದುತ್ತರ //
4 : ದುಷ್ಟತನಕೆ ದೇವ, ನಿನಗಿಲ್ಲ ಒಲವು /
ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು //
5 : ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು /
ನಿನಗೆ ವೈರಿಗಳಾಗುವರು ಅಧರ್ಮಿಗಳು /
6 : ಹುಸಿನುಡಿವವರನು ಪ್ರಭು, ನೀ
ನಾಶಮಾಡುವೆ /
ಹಿಂಸಕರನು, ವಂಚಕರನು ನೀ ಹೇಸಿಬಿಡುವೆ //
7 : ನಿನ್ನ ಮಂದಿರಕೆ ಬರುವೆ ನಿನ್ನಪಾರ
ಪ್ರೀತಿಯ ನಿಮಿತ್ತ /
ಭಕುತಿಯಿಂದ ಅಡ್ಡ ಬೀಳುವೆ ನಿನ್ನ
ಪವಿತ್ರಾಲಯದತ್ತ //
8 : ಶತ್ರುಗಳು ಮುತ್ತಿಹರು,
ಸತ್ಯ ಪಥದಲಿ ನಡೆಸೆನ್ನನು /
ನೇರಮಾಡೆನಗೆ ದೇವಾ, ನಿನ್ನ
ಸಿರಿಮಾರ್ಗವನು //
9 : ಅವರ ಬಾಯಲಿ ಹುಸಿನುಡಿ,
ಹೃದಯವಾದರೊ ವಿನಾಶದ ಶರಧಿ /
ಅವರ ಜಿಹ್ವೆಯಲಿ ಮುಖಸ್ತುತಿ,
ಕಂಠವಾದರೋ ತೆರೆದ ಸಮಾಧಿ //
10 : ಅವರಪರಾಧಿಗಳೆಂದು ಹೇ ದೇವಾ,
ನಿರ್ಣಯಿಸಿಬಿಡು /
ಅವರ ಮೋಸದ ಪಾಶದಲೇ ಅವರನು
ಸಿಕ್ಕಿಸಿಬಿಡು /
ಅವರನೇಕ ಪಾಪಗಳಿಗಾಗಿ ಅವರನು
ದಬ್ಬಿಬಿಡು /
ಅವರು ನಿನ್ನ ವಿರುದ್ಧ ದಂಗೆಯೆದ್ದವರು,
ನೋಡು //
11 : ದೊರಕುವುದು ದೇವಾ, ನಿನ್ನಾಶೀರ್ವಾದ
ಸಜ್ಜನರಿಗೆ /
ಕವಚವಾದಂತಿಹುದು ನಿನ್ನ ಕರುಣೆ
ಅಂಥವರಿಗೆ //
12 :
ಎಂದೇ ಹರ್ಷಾನಂದಗೊಳ್ವರು
ನಿನ್ನನಾಶ್ರಯಿಸಿದವರೆಲ್ಲರು /
ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ
ನಾಮಪ್ರಿಯರೆಲ್ಲರು //