1 : ಉಜ್ವಲಾಲೋಚನೆಯೊಂದು
ತುಡುಕುತಿದೆ ಮನದಲಿ /
ರಚಿಸಲಿರುವೆ ಮಹಾರಾಜನಿಗೊಂದು
ಗೀತಾಂಜಲಿ /
ನನ್ನ ಜಿಹ್ವೆ, ಸಜ್ಜಾದ ಬರಹಗಾರನ ಲೇಖನಿ //
2 : ನರಮಾನವರೊಳು ನೀ ಸುರ ಸುಂದರ /
ನಿನ್ನ ಮುಖವಾಣಿ ಅತ್ಯಂತ ಮಧುರ /
ದೇವಾನುಗ್ರಹ ನಿನಗಿದೆ ನಿರಂತರ //
3 : ಕಟ್ಟಿಕೋ ಶೂರನೇ, ಪಟ್ಟಗತ್ತಿಯನು
ಸೊಂಟಕೆ /
ಸಂಭ್ರಮ, ಶೋಭೆ, ಸಡಗರ ಸಲ್ಲತಕ್ಕವು
ನಿನಗೆ //
4 : ಹೊರಡು ಒಡ್ಡೋಲಗದಿಂದ
ವಾಹನಾರೂಢನಾಗಿ /
ತೆರಳು ಭುಜಬಲದಿ
ಮಹತ್ಕಾರ್ಯವೆಸಗುವವನಾಗಿ /
ಹೆಣಗು ಸತ್ಯಕ್ಕಾಗಿ, ನ್ಯಾಯನೀತಿಪರನಾಗಿ //
5 : ನಿನ್ನಂಬು ಬಾಣಗಳು ಹರಿತವಾದುವು /
ರಾಜದ್ರೋಹಿಗಳನು ಅವು ಇರಿಯುವುವು /
ಜನಾಂಗಗಳು ನಿನ್ನ ಪಾದಕ್ಕೆರಗುವುವು //
6 : ಅಮರವಾದುದು ಹೇ ದೇವಾ, ನಿನ್ನ
ಸಿಂಹಾಸನ /
ನ್ಯಾಯಸ್ಥಾಪಕವಾದುದು ನಿನ್ನ ರಾಜ ದಂಡ //
7 : ಪ್ರೀತಿಸಿದೆ ನೀನು ಧರ್ಮವನು
ದ್ವೇಷಿಸಿದೆ ಅಧರ್ಮವನು /
ಆನಂದ ತೈಲದಿಂದಭಿಷೇಕಿಸಿಹನು ನಿನ್ನ,
ದೇವನು /
ಮಿತ್ರರಿಗಿಂತ ಮಿಗಿಲಾಗಿ ಅಭಿಷೇಕಿಸಿಹನು
ಆತನು ನಿನ್ನನು //
8 : ಘಮಘಮಿಸುತಿದೆ ನಿನ್ನುಡಿಗೆ
ರಸಗಂಧ, ಅಗರು, ಚಂದನಗಳಿಂದ /
ಮನರಂಜನೆಗೊಳ್ಳುತಿರುವೆ
ದಂತ ಮಂದಿರದುನ್ನತ ವಾದ್ಯಗಳಿಂದ /
9 : ರಾಜಕುವರಿಯರಿಹರು ನಿನ್ನ
ಸ್ತ್ರೀ ಪರಿವಾರದಲಿ /
ಪಟ್ಟದ ರಾಣಿಯು ನಿಂತಿಹಳು ನಿನ್ನ
ಬಲಪಾಶ್ರ್ವದಲಿ /
ಓಫಿರ್ ನಾಡಿನ ಚಿನ್ನಾಭರಣಗಳಿಂದ
ಭೂಷಿತಳಾಗಿ //
10 : ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ
ಕಿವಿಗೊಡು /
ನಿನ್ನ ಜನರನು, ತೌರು ಮನೆಯನು
ಮರೆತುಬಿಡು //
11 : ಆಗ ಬಯಸುವನು ರಾಜ ನಿನ್ನ ಲಾವಣ್ಯವನು / ಆತನ ಪಾದಕ್ಕೆರಗು, ಆತನೇ ನಿನಗೊಡೆಯನು //
12 : ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು
ಸನ್ಮಾನಿಸುವರು /
ಸಿರಿವಂತ ಪ್ರಜೆಗಳು ನಿನ್ನುಪಕಾರವನು
ಕೋರಿಬರುವರು //
13 : ರಾಜಕುವರಿ ವಿರಾಜಿಸುತಿಹಳು
ಅಂತಃಪುರದಲಿ /
ಮೆರೆಯುತಿಹಳು ಜರತಾರಿ
ವಸ್ತ್ರಾಭರಣಗಳಲಿ //
14 : ಭೂಷಿತಳಾಗಿಹಳಾಕೆ ಕಸೂತಿಕೆಲಸದ ವಸ್ತ್ರಗಳಿಂದ / ಬರುತಿಹಳು ರಾಜನ ಬಳಿಗೆ ಸಖಿಯರ ಪರಿವಾರ ಸಮೇತ //
15 : ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ /
ಪ್ರವೇಶಿಸುತಿಹರು ಅರಮನೆಯನು
ಉತ್ಸಾಹದಿಂದ //
16 : ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ
ಸ್ಥಾನವನು /
ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ
ಜಗದೊಳು //
17 : ನಿನ್ನ ನಾಮಸ್ಮರಣೆಯನುಳಿಸುವೆನು
ಚಿರಕಾಲ /
ಹೊಗಳುವರು ಸಕಲ ಜನರು ನಿನ್ನನು
ಅನುಗಾಲ //