1 : ದಿಕ್ಕಿಲ್ಲದವನನು ಲಕ್ಷಿಸುವವನು
ಧನ್ಯನು /
ಆಪತ್ಕಾಲದಲಿ ಆದವನನು ಪ್ರಭು
ರಕ್ಷಿಸುವನು //
2 : ಅಂಥವನನು ಪ್ರಭು ಜೀವದಿಂದಿರಿಸುವನು,
ಸುರಕ್ಷಿತವಾಗಿಡುವನು /
ನಾಡಿನಲ್ಲವನನು ಧನ್ಯನಾಗಿಸುವನು,
ಶತ್ರುಗಳಿಗಧೀನನಾಗಿಸನು //
3 : ರೋಗದಿ ಹಾಸಿಗೆ ಹಿಡಿದಿರಲು
ಪ್ರಭು ಸುಧಾರಿಸುವನು /
ರೋಗ ನಿವಾರಿಸಿ ಅವನಿಗೆ
ಆರೋಗ್ಯವನೀಯುವನು //
4 : ನಾನಂತು, “ಪ್ರಭೂ ಕರುಣಿಸು,
ಗುಣಪಡಿಸೆನ್ನನು /
ನಿನಗೆ ವಿರುದ್ಧ ಪಾಪಗೈದೆ” ಎಂದು
ಬೇಡುವೆನು //
5 : “ಇವನ ಸಾವೆಂದು? ಇವ ನಿರ್ನಾಮ
ವಾಗುವದೆಂತು?” /
ನನಗೆ ಕೇಡುಬಯಸುವವರ ಕುಹಕ
ನುಡಿಯಿದು //
6 : ನೋಡಬರುವರು, ನವಿರಾದ
ಮಾತನಾಡುವರವರು /
ಕೇಡನೆ ತುಂಬಿಸಿಕೊಂಡು ಹೊರಬಂದೊಡನೆ
ಹರಡುವರು //
7 : ಹಗೆಯವರು ಎನಗೆ ವಿರುದ್ಧ
ಗುಜುಗುಟ್ಟುತಿಹರು /
ಅವರೆಲ್ಲರು ಎನಗೆ ಕೇಡನೆ ಕಲ್ಪಿಸುತಿಹರು://
8 : “ಹಾಸಿಗೆಯಿಂದವನು ಮರಳಿ ಏಳುವಂತಿಲ್ಲ /
ಘಾಸಿ ರೋಗದಿಂದ ವಾಸಿಯಾಗುವಂತಿಲ್ಲ”//
9 : ನನ್ನಾಪ್ತ ಮಿತ್ರನು, ನನ್ನ ನಂಬಿಕೆಗೆ ಪಾತ್ರನು /
ನನ್ನೊಡನೆ ಉಂಡವನು, ನನಗೆರಡು
ಬಗೆದಿಹನು //
10 : ನೀನಾದರೋ ಪ್ರಭು ಕರುಣಿಸು,
ಏಳ ಮಾಡೆನ್ನನು /
ನಾನವರಿಗಾಗ ಮುಯ್ಯಿಗೆ ಮುಯ್ಯಿ
ತೀರಿಸುವೆನು //
11 : ವಿರೋಧಿಗಳೆನ್ನ ಮೇಲೆ ಜಯಗೊಳ್ಳದಂದು /
ಅರಿತುಕೊಳ್ವೆನು ನಿನ್ನೊಲುಮೆ
ನನಗಿದೆಯೆಂದು //
12 : ನಿರ್ದೋಷಿಯಾದೆನ್ನನು ನೀನುದ್ಧರಿಸುವೆ /
ಚಿರಕಾಲ ನಿನ್ನ ಸನ್ನಿಧಿಯಲ್ಲೆನ್ನನು ಇರಿಸುವೆ //
13 : ಇಸ್ರಯೇಲರ ದೇವರಾದ ಪ್ರಭುವಿಗೆ ಜಯ /
ಯುಗಯುಗಾಂತರಕು ಆಮೆನ್ ಆಮೆನ್,
ಜಯಜಯ //