1 : ನಾ ಇಂತೆಂದುಕೊಂಡೆ:
“ಜಾಗರೂಕನಾಗಿರುವೆ
ಜಿಹ್ವೆ ಪಾಪಕ್ಕೆಳೆಯದಂತೆ /
ಬಾಯಿಗೆ ಕುಕ್ಕೆ ಹಾಕಿಕೊಂಡಿರುವೆ ದುರ್ಜನರ
ಮುಂದೆ” //
2 : ಮೌನವಿದ್ದೆ, ಸನ್ನುಡಿಯದೆಯೂ ಸುಮ್ಮನಿದ್ದೆ / ಉಲ್ಬಣಿಸುತ್ತಿತ್ತು ವೇದನೆಯು ಎಡೆಬಿಡದೆ //
3 : ಎದೆಯ ತಾಪ ಹೆಚ್ಚಿತು, ಚಿಂತೆ ಕಾವೇರಿತು / ಆಗತಾನೆ ಬಾಯ್ತೆರೆದೆ ನಾನಿಂತೆಂದು://
4 : “ನನ್ನ ಜೀವಾಯುಸ್ಸು ಎನಿತು? ನನ್ನ ಬಾಳಿನ ಮುಗಿವೆಂದು? / ತಿಳಿಯಪಡಿಸು ನನಗೆ ಪ್ರಭು, ನಾನು ಬಲು ಅಸ್ಥಿರನೆಂದು” //
5 : ನನ್ನಾಯುಸ್ಸು ಗೇಣುದ್ದ, ನಿನ್ನೆಣಿಕೆಗದು ಶೂನ್ಯ / ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ!//
6 : ನರಮಾನವನು ಮೆರೆದಾಡುವನು ಮಾಯೆಯಂತೆ / ಅವನ ಸಡಗರವೆಲ್ಲವೂ ನಿರರ್ಥಕದಂತೆ / ಕೂಡಿಪನಾತ ಸಿರಿ ಅದು ಯಾರದಾಗುವುದೆಂದು ಅರಿಯದೆ //
7 : ಇಂತಿರಲು ಪ್ರಭು, ನಾನೇತಕೆ ಕಾದಿರಬೇಕು?/ ನೀನೆ ಅಲ್ಲವೆ ನನಗೆ ನಂಬಿಕೆ, ಇದು ಸಾಕು //
8 : ಮುಕ್ತಗೊಳಿಸೆನ್ನ ಪ್ರಭು, ಎಲ್ಲಪರಾಧಗಳಿಂದ / ಕಾದಿರಿಸೆನ್ನನು ಮೂರ್ಖರ ತಿರಸ್ಕಾರದಿಂದ //
9 : ಮೌನದಿಂದಿರುವೆ, ಬಾಯ್ದೆರೆಯದಿರುವೆ / ನನಗೊದಗಿರುವುದು ನಿನ್ನಿಂದಲ್ಲವೆ?//
10 : ಸಾಕು ಮಾಡು ನಿನ್ನ ಕೈ ಹೊಡೆತವನು / ಅದರಿಂದ ನಾ ಸಾಯುತ್ತಿರುವೆನು //
11 : ಪಾಪದ ಪ್ರಯುಕ್ತ ಮಾನವನು ಶಿಕ್ಷಿಸುವಾಗ / ನುಸಿಹತ್ತಿದಂತೆ ನಾಶಪಡಿಸುವೆ ಅವನಾಸ್ಥೆಯನಾಗ / ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ //
12 : ನನ್ನ ಮೊರೆಯ ಕೇಳು, ಪ್ರಾರ್ಥನೆಯನಾಲಿಸು / ಸುಮ್ಮನಿರದೆ ನನ್ನ ಕಂಬನಿಯನೀಕ್ಷಿಸು // ಹೇ ಪ್ರಭು, ನಾನಿನ್ನ ಆಗಂತುಕನಯ್ಯಾ / ಪೂರ್ವಜರಂತೆ ನಾ ಪರದೇಶಿಯಯ್ಯಾ //
13 : ನಾ ಕಾಲವಾಗಿ ಕಣ್ಮರೆಯಾಗುವೆ ಇಲ್ಲಿಂದ / ಆ ಮುನ್ನ ಹೊರಳಿಸು ಕೋಪದೃಷ್ಟಿಯನು ನನ್ನಿಂದ / ನಾ ಬಾಳುವಂತೆ ಮಾಡು ಪ್ರಭು, ಸಂತಸದಿಂದ //