Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಕೋಪದಿಂದೆನ್ನ ಪ್ರಭು, ಬೈಯಬೇಡ / ರೋಷದಿಂದೆನ್ನನು ದಂಡಿಸಲು ಬೇಡ //
2 : ನಿನ್ನ ಬಾಣಗಳು ನಾಟಿವೆ ನನ್ನೊಳಗೆ / ನಿನ್ನ ಹಸ್ತವು ಎರಗಿದೆ ನನ್ನ ಮೇಲೆ //
3 : ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ / ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ //
4 : ಮುಳುಗಿಸಿಬಿಟ್ಟಿವೆ ನನ್ನ ಅಪರಾಧಗಳೆನ್ನನು / ಅಮುಕಿಬಿಟ್ಟಿವೆ ಹೊರಲಾರದ ಹೊರೆಯಂತೆನ್ನನು //
5 : ಕೀವು ಸೋರಿ ನಾರುತ್ತಿವೆ ನನ್ನ ಪಾಪದ ಗಾಯಗಳು / ಇದಕ್ಕೆಲ್ಲ ಕಾರಣವು ನನ್ನ ಮೂರ್ಖತನವು//
6 : ಬಾಗಿ ಕುಗ್ಗಿ ಹೋಗಿರುವೆ ಪ್ರಭು ಬಹಳವಾಗಿ ದಿನವೆಲ್ಲ ಅಲೆಯುತ್ತಿರುವೆ ದುಃಖಭರಿತನಾಗಿ //
7 : ಉರಿಬಡಿದಂತಿದೆ ಎನ್ನ ಸೊಂಟಕೆ / ಆರೋಗ್ಯವಿಲ್ಲದಿದೆ ದೇಹಕೆ //
8 : ಜೋಮು ಹಿಡಿದಂತಿದೆ, ಜೀವ ಹಿಂಡಿದಂತಿದೆ / ಹೃದಯವೇದನೆಯಿಂದ ನರಳಾಡುತ್ತಿರುವೆ //
9 : ನನ್ನ ಗೋಳಾಟ ಪ್ರಭು, ನಿನಗೆ ಗೊತ್ತಿದೆಯಯ್ಯಾ / ನನ್ನ ಮನದಾಸೆ ನಿನಗೆ ಬಯಲಾಗಿದೆಯಯ್ಯಾ //
10 : ಬಡಿದುಕೊಳ್ಳುತಿದೆ ಹೃದಯ, ಹುದುಗಿಹೋಗಿದೆ ಚೇತನ / ಮಬ್ಬಾಗಿ ಹೋಗಿದೆ ನನ್ನೆರಡು ನಯನಸಾಧನ //
11 : ನನ್ನ ಜಾಡ್ಯ ನೋಡಿ ದೂರ ಸರಿದರು ನೆಂಟರಿಷ್ಟರು / ಬಳಿಬಾರದೆ ಅಲ್ಲೇ ನಿಂತರು ಬಂಧು ಬಳಗದವರು //
12 : ಉರಲನೊಡ್ಡಿಹರು ನನ್ನ ಪ್ರಾಣಹಂತಕರು / ನಿರ್ಧರಿಸಿಹರು ವಿನಾಶವನ್ನು ಕೇಡು ಬಗೆವವರು / ಕುತಂತ್ರವ ಮಾಡುವರು ಸತತ ಮೋಸಗಾರರು //
13 : ನಾನಂತು ಕೇಳದಿದ್ದೆ ಕಿವುಡನಂತೆ / ಮರು ಉತ್ತರಿಸದೆ ಮೌನವಿದ್ದೆ ಮೂಕನಂತೆ //
14 : ಅಹುದಹುದು ಕಿವಿ ಕೇಳಿಸದವನಂತಿದ್ದೆ / ಪ್ರತ್ಯುತ್ತರ ಕೊಡಲಾಗದವನಂತಿದ್ದೆ //
15 : ನಿನಗಾಗಿ ಪ್ರಭು, ಕಾದಿರುವೆನಯ್ಯಾ / ನನಗಾಗಿ ನೀ ಉತ್ತರಿಸೋ, ದೇವಾ //
16 : ಶತ್ರುಗಳು ಹರ್ಷಿಸಬಾರದು ನನ್ನ ವಿಷಯದಲಿ / ಹಿಗ್ಗಬಾರದವರು ನಾ ಜಾರಿ ಬಿದ್ದಲ್ಲಿ //
17 : ಇಗೋ, ನಾನೆಡವಿ ಬೀಳಲಿರುವೆ / ಆಪತ್ತಿಗಾಗಿ ಸಂಕಟಪಡುತ್ತಿರುವೆ //
18 : ನಾನಪರಾಧಿಯೆಂದು ನಿವೇದಿಸುವೆ / ಪಾಪಕ್ಕಾಗಿ ಪಶ್ಚಾತ್ತಾಪ ಪಡುವೆ //
19 : ಬಲಿಷ್ಟ ವೈರಿಗಳು ವಿರೋಧಿಸುತಿಹರು ನಿಷ್ಕಾರಣವಾಗಿ / ಶತ್ರುಗಳನೇಕರು ದ್ವೇಷಿಸುತಿಹರು ಅನ್ಯಾಯವಾಗಿ //
20 : ಎಸಗಿದರು ಉಪಕಾರಕೆ ಪ್ರತಿಯಾಗಿ ಅಪಕಾರ / ಎದುರಿಸುತಿಹರೀಗ ನಾ ಹಿಡಿದಿರುವ ಸನ್ಮಾರ್ಗ //
21 : ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ / ದೇವಾ, ನನಗೆ ದೂರವಾಗಬೇಡಯ್ಯಾ //
22 : ಓ ಪ್ರಭುವೇ, ನನ್ನುದ್ಧಾರಕನೆ, / ನನಗೆ ನೆರವಾಗಲು ಬಾ ಬೇಗನೆ //

· © 2017 kannadacatholicbible.org Privacy Policy