Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ / ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ //
2 : ಅವರು ಒಣಗಿ ಹೋಗುವರು ಕಾಡುಗರಿಕೆ ಯಂತೆ / ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ //
3 : ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು / ಸುರಕ್ಷಿತವಾಗಿ ಬಾಳು ಸಿರಿನಾಡಿನಲ್ಲಿದ್ದು //
4 : ಪ್ರಭುವಿನಿಂದಲೆ ಬಯಸು ನಿನ್ನಾನಂದವನು / ನೆರವೇರಿಸುವನಾತ ನಿನ್ನ ಮನದಾಸೆಯನು //
5 : ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು / ಭರವಸೆಯಿಂದಿರು, ಆತನದನು ಸಾಗಿಸುವನು //
6 : ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ / ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ //
7 : ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು / ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು //
8 : ಅಡಗಿಸು ಕೋಪವನು; ವರ್ಜಿಸು ಕ್ರೋಧವನು / ಕಿಡಿಕಿಡಿಯಾಗಬೇಡ, ತರುವುದದು ಕೇಡನು //
9 : ವಧಿತರಾಗಿ ನಾಶವಾಗುವರು, ಕೇಡು ಮಾಡುವವರು ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು //
10 : ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು / ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು //
11 : ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ / ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ //
12 : ದುರ್ಜನನು ಹೂಡಿಹನು ಒಳಸಂಚು ಸಜ್ಜನನ ವಿರುದ್ಧ / ಕಟಕಟನೆ ಹಲ್ಲು ಕಡಿಯುತಿಹನಿದೋ ಆತನ ವಿರೋಧ //
13 : ಅಂಥವನ ಕಂಡು ಪ್ರಭು ನಸುನಗುತಿಹನು / ಅವನಿಗೊದಗಲಿಹ ಗತಿಯನು ಕಾಣುತಿಹನು //
14 : ಹಿಡಿದಿಹರು ದುರುಳರು ಕತ್ತಿಯನು, ಎತ್ತಿಹರು ಬಿಲ್ಲನು / ಕೆಡಹಲು ದೀನದಲಿತರನು, ಕೊಲ್ಲಲು ಸಜ್ಜನರನು //
15 : ಹಿಡಿದ ಕತ್ತಿ ಹಿಡಿದವರೆದೆಯನೆ ಇರಿವುದು / ಎತ್ತಿದ ಬಿಲ್ಲುಬಾಣ ಸಿಡಿದು ಮುರಿವುದು //
16 : ದುರುಳರ ವಿಪುಲ ಆಸ್ತಿಪಾಸ್ತಿಗಿಂತಲು / ಸತ್ಯವಂತರ ಬಡತನವೆನಿತೊ ಮಿಗಿಲು //
17 : ಬತ್ತಿಹೋಗುವುದು ದುರ್ಜನರ ಭುಜಬಲ / ಸತ್ಯವಂತರಿಗೆ ಪ್ರಭುವೇ ಉನ್ನತಬಲ //
18 : ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ / ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ //
19 : ಮಾನನಷ್ಟವಿರದು ಕಷ್ಟಕಾಲದಲಿ / ಕುಂದುಕೊರತೆಯಿರದು ಬರಗಾಲದಲಿ //
20 : ದುರುಳರ ಬೆಡಗೋ ಬಾಡಿಹೋಗುವುದು ಹುಲ್ಲಿನಂತೆ / ಪ್ರಭುವಿನ ಶತ್ರುಗಳು ತೇಲಿಹೋಗುವರು ಹೊಗೆಯಂತೆ //
21 : ಕೊಂಡ ಸಾಲವನು ತೀರಿಸಲಾರನಾ ದುರ್ಜನನು / ಉದಾರವಾಗಿ ದಾನ ಧರ್ಮಮಾಳ್ಪನಾ ಸಜ್ಜನನು //
22 : ಪ್ರಭುವಿನಿಂದ ಆಶೀರ್ವದಿತರು ನಾಡಿಗೆ ಬಾಧ್ಯಸ್ಥರು / ಆತನಿಂದ ಶಾಪಗ್ರಸ್ಥರು ಬಹಿಷ್ಕøತರು //
23 : ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ / ಅವನ ನಡತೆಗೆ ಆತನೆ ಮಾರ್ಗದರ್ಶನ //
23 : ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ / ಅವನ ನಡತೆಗೆ ಆತನೆ ಮಾರ್ಗದರ್ಶನ //
24 : ಬಿದ್ದರೂ ಅವನೆದ್ದೇ ತೀರುವನು / ಪ್ರಭು ಅವನಿಗೆ ಊರುಗೋಲಾಗಿಹನು //
25 : ಸಜ್ಜನ ದಿಕ್ಕಿಲ್ಲದಿರುವುದನು, ಅವನ ಸಂತತಿ ಭಿಕ್ಷೆ ಬೇಡುವುದನು / ನಾ ಕಾಣೆನು, ವೃದ್ಧ ನಾನೆಂದೂ ಕಾಣೆನು, ಬಾಲ್ಯದಿಂದ ಕಾಣೆನು //
26 : ದಾನ ನೀಡುವನು, ಸಾಲ ನಿರಾಕರಿಸನು ಸಜ್ಜನನು / ಆತನ ಸಂತಾನ ಹೊಂದುವುದು ಆಶೀರ್ವಾದವನು //
27 : ಕೆಟ್ಟದನು ಬಿಡು, ಒಳ್ಳೆಯದನು ಮಾಡು / ಸಿರಿನಾಡಿನಲಿ ಚಿರಕಾಲ ಬಾಳು //
28 : ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು / ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು //
29 : ಸಜ್ಜನರು ಸಿರಿನಾಡಿಗೆ ಬಾಧ್ಯಸ್ಥರು / ಅಲ್ಲವರು ಶಾಶ್ವತವಾಗಿ ಬಾಳುವರು //
30 : ಸಜ್ಜನರ ಬಾಯಿ ಆಡುವುದು ಸುಜ್ಞಾನವನು / ಅವನ ನಾಲಿಗೆ ನುಡಿವುದು ನ್ಯಾಯನೀತಿಯನು //
31 : ಅವನ ಎದೆಯಲ್ಲಿದೆ ದೇವರ ನಿಯಮ / ನೆಲೆತಪ್ಪದು ಅವನ ನಡತೆಯ ಕ್ರಮ //
32 : ದುಷ್ಟನಿಟ್ಟಿರುವನು ಕಣ್ಣನು ಸಜ್ಜನರ ಮೇಲೆ / ಹೊಂಚುಹಾಕಿ ನೋಡುತಿಹನು ಮಾಡಲವರ ಕೊಲೆ //
33 : ಪ್ರಭು ಬಿಡನವನನು ದುಷ್ಟ ಶಕ್ತಿಯ ವಶಕ್ಕೆ / ಗುರಿಪಡಿಸನು ನ್ಯಾಯಸ್ಥಾನದ ಶಿಕ್ಷೆಗೆ //
34 : ಪ್ರಭುವನು ನಂಬಿ ನಡೆ ಆತನ ಪಥದಲೇ / ಉದ್ಧಾರವಾಗುವೆ, ನಾಡಿಗೊಡೆಯನಾಗುವೆ / ದುಷ್ಟರ ವಿನಾಶವನು ಕಣ್ಣಾರೆ ಕಾಣುವೆ //
35 : ದುರುಳನೋರ್ವ ಮಹಾಗರ್ವದಿಂದ ಬಾಳುತ್ತಿದ್ದ / ಹುಲುಸಾಗಿ ಬೆಳೆದ ದೇವದಾರು ಮರದಂತಿದ್ದ //
36 : ಕ್ರಮೇಣ ನಾನು ಆ ಮಾರ್ಗವಾಗಿ ನಡೆಯಲು / ಕಾಣಲಿಲ್ಲ, ಗುರುತೂ ಇರಲಿಲ್ಲ ಹುಡುಕಲು //
37 : ನಿರಪರಾಧಿಯನ್ನು ಲಕ್ಷಿಸು, ಸತ್ಪುರುಷನನು ವೀಕ್ಷಿಸು / ಶಾಂತಿಪ್ರಿಯನಿಗಿದೆ ಸಂತಾನವೃದ್ಧಿ, ಇದ ಗಮನಿಸು //
38 : ನಾಶವಾಗುವುದು ನಿಜ, ದೋಷಿಗಳ ಮನೆತನ / ನಿರ್ಮೂಲವಾಗುವುದು ದುರುಳರ ಸಂತಾನ //
39 : ಸಜ್ಜನರ ಜೀವೋದ್ಧಾರ ಪ್ರಭುವಿನಿಂದ / ಆಪತ್ಕಾಲದಲಿ ಆಶ್ರಯ ಆತನಿಂದ //
40 : ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು / ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು //

· © 2017 kannadacatholicbible.org Privacy Policy