Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ನನ್ನೊಡನೆ ವ್ಯಾಜ್ಯ ಮಾಡುವವ ರೊಡನೆ ವ್ಯಾಜ್ಯ ಮಾಡು / ನನ್ನೊಡನೆ ಕದನ ಮಾಡುವವರೊಡನೆ ಪ್ರಭು, ಕದನ ಮಾಡು //
2 : ಖಡ್ಗ ಗುರಾಣಿಗಳನು ಧರಿಸಿಕೊ / ನನಗೆ ರಕ್ಷಣೆಯಾಗಿ ನಿಂತುಕೊ //
3 : ತಡೆ ನೀನು ಬಿಲ್ಲು ಬರ್ಜಿಯಿಂದ ಬೆನ್ನಟ್ಟಿ ಬರುವ ವೈರಿಯನು / ನೀಡೆನ್ನ ಮನಕೆ, ನೀನೆ ರಕ್ಷಕನೆಂಬ ಅಭಯವನು //
4 : ನನ್ನ ಕೊಲೆಗೆ ಯತ್ನಿಸುವವನು ತಲೆ ತಗ್ಗಿಸಲಿ ನಿರಾಶೆಗೊಂಡು / ನನಗೆ ಕೇಡನು ಮಾಡುವವರು ಓಡಿಹೋಗಲಿ ಗಲಿಬಿಲಿಗೊಂಡು //
5 : ಬಿರುಗಾಳಿಗೆ ತರಗೆಲೆಯಂತೆ ತೂರಿಹೋಗಲಿ | ಪ್ರಭುವಿನ ದೂತನವರನು ಬೆನ್ನಟ್ಟಿ ಹೋಗಲಿ |
6 : ಇಳಿಜಾರು, ಕಾರಿರುಳು ಇರುವ ಹಾದಿಯಲಿ / ಪ್ರಭುವಿನ ದೂತನವರನು ಓಡಿಸಿಬಿಡಲಿ //
7 : ನಿಷ್ಕಾರಣ ಕೊಲೆಮಾಡಲೆನ್ನ ಬಲೆ ಯೊಡ್ಡಿಹರು / ಆ ಕಾರಣ ಪ್ರಾಣ ತೆಗೆಯಲು ಗುಂಡಿ ತೋಡಿಹರು //
8 : ಒಡ್ಡಿದ ಬಲೆಯಲಿ ಒಡ್ಡಿದವನೇ ಪಟಕ್ಕನೆ ಸಿಕ್ಕಿ ಬೀಳಲಿ / ತೋಡಿದ ಗುಣಿಯಲಿ ತೋಡಿದವನೇ ತಟಕ್ಕನೆ ಬಿದ್ದು ಹೋಗಲಿ //
9 : ಆಗೆನ್ನ ಮನವು ಆನಂದಗೊಳ್ಳುವುದು ಪ್ರಭುವಿನಲಿ / ಆಹ್ಲಾದಗೊಳ್ಳುವುದು ಆತನಿತ್ತಾ ರಕ್ಷಣೆಯಲಿ //
10 : “ಬಿಡಿಸಿದೆ ಬಡವನನು ದರೋಡೆಗಾರ ರಿಂದ / ರಕ್ಷಿಸಿದೆ ದುರ್ಬಲನನು ಬಲಾಢ್ಯರಿಂದ / ಹೇ ಪ್ರಭು, ನಿನಗೆ ಸಮಾನರಾರೆಂದು” / ಹೊಗಳುವುವು ನನ್ನೆಲುಬುಗಳೊಂದೊಂದು //
11 : ಸುಳ್ಳು ಸಾಕ್ಷಿಗಳೆದ್ದಿಹರು ನನಗೆ ವಿರುದ್ಧ / ಹೊರಿಸುತಿಹರು ನನಗೇ ತಿಳಿಯದ ಅಪರಾಧ //
12 : ಎಸಗುತಿಹರು ಉಪಕಾರಕೆ ಅಪಕಾರ / ಮಾಡಿಹರೆನ್ನನು ನಿರ್ಗತಿಕ ಪಿಂಜಾರ //
13 : ಅವರು ಅಸ್ವಸ್ಥರಾಗಿರಲು ಶೋಕವಸ್ತ್ರಧಾರಿಯಾದೆ / ತಲೆಬಾಗಿ ಜಪಿಸಿದೆ, ನಾ ಮನನೊಂದು ಉಪವಾಸವಿದ್ದೆ //
14 : ಶೋಕತಪ್ತನಾದೆ ಗೆಳೆಯನಿಗೊ ಬಳಗದವನಿಗೊ ಎಂಬಂತೆ / ಅತ್ತು ಪ್ರಲಾಪಿಸಿದೆ ತಾಯನು ಕಳೆದುಕೊಂಡ ತಬ್ಬಲಿಯಂತೆ //
15 : ನನಗೆ ಆಪತ್ತೊದಗಲದೊ ಸಂತೋಷಿಸಿದರು ಸಭೆಗೂಡಿ / ಸೂರೆಮಾಡಿದರು ತಿರುತಿರುಗಿ ಆ ಭ್ರಷ್ಟರೊಟ್ಟುಗೂಡಿ //
16 : ಅಣಕಿಸಿ ಹಾಸ್ಯ ಮಾಡಿದರು ಕೀಟಲೆಗಾರರಂತೆ / ಕಟಕಟನೆ ಹಲ್ಲುಕಡಿದರು ಕಡುಕೋಪಿಗಳಂತೆ //
17 : ಇನ್ನೆಷ್ಟರವರೆಗೆ ಪ್ರಭು, ನೀ ಸುಮ್ಮನಿರುವೆ ನೋಡುತ? / ಬಿಡಿಸೆನ್ನ ಹಾವಳಿಯಿಂದ, ಸಿಂಹಗಳ ಬಾಯಿಂದ //
18 : ಮಹಾಸಭೆಯಲ್ಲಾಗ ನಿನ್ನನು ಕೊಂಡಾಡುವೆ / ಬಹುಜನರ ಮುಂದೆ ನಿನ್ನ ಗುಣಗಾನಮಾಡುವೆ //
19 : ಕಳ್ಳ ವೈರಿಗಳೆನ್ನ ನೋಡಿ ಹಿಗ್ಗಲು ಬಿಡಬೇಡ / ಈ ಕಾರಣ ಶತ್ರುಗಳು ಕಣ್ಣು ಮಿಟುಕಿಸುವುದು ಬೇಡ //
20 : ಸಮಾಧಾನಕರವಲ್ಲ ಅವರಾಡುವ ನುಡಿಗಳು / ಮುಗ್ಧನಾಡಿಗರನು ಮೋಸಗೊಳಿಸುವಾ ಮಾತುಗಳು //
21 : ಎನ್ನೀ ಪರಿಸ್ಥಿತಿಯನು ಕಂಡು ಅವರು ಬಾಯಿ ಕಿಸಿದು / ನುಡಿದರು, “ಆಹಾ! ಕಣ್ಣಾರೆ ಕಂಡೆವಲ್ಲಾ” ಎಂದು //
22 : ನೀನೇ ನೋಡಿರುವೆ ಪ್ರಭು, ಇನ್ನು ಸುಮ್ಮನಿರಬೇಡ / ನನ್ನೊಡೆಯಾ, ನನಗಿನ್ನಾದರು ದೂರವಾಗಿರಬೇಡ //
23 : ನನ್ನ ನ್ಯಾಯವನು ನಿರ್ಣಯಿಸು ದೇವಾ ಎಚ್ಚೆತ್ತು / ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು ನಿಂತು //
24 : ಹೇ, ದೇವಾ, ನಿನ್ನ ನೀತಿಗನುಸಾರ ತೀರ್ಪುಕೊಡು / ಶತ್ರುಗಳೆನ್ನ ವಿಷಯದಲ್ಲಿ ಹರ್ಷಗೊಳ್ಳದಂತೆ ಮಾಡು //
25 : ತಮ್ಮಾಸೆ ಕೈಗೂಡಿತೆನಲು ಅವರಿಗಿರಬಾರದು ಅವಕಾಶ / ಅವನನು ಕಬಳಿಸಿಬಿಟ್ಟೆವು ಎಂದು ಕೊಚ್ಚಿ ಕೊಳ್ಳುವ ಸಂತೋಷ //
26 : ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ ಸಿಗ್ಗು / ನನ್ನನು ಕುಗ್ಗಿಸಿ ಮೆರೆವವರನು ಮುಚ್ಚಲಿ ಲಜ್ಜೆಯ ಮುಸುಕು //
27 : ನನಗೆ ನ್ಯಾಯ ಬಯಸುವವರು ನಲಿದು ಮಾಡಲಿ ಜಯಕಾರ / “ದಾಸನ ಹಿತೈಷಿ ಪ್ರಭುಗೆ, ಜೈ” ಎಂಬ ನಿರಂತರ ಪ್ರಚಾರ //
28 : ಆಗೆನ್ನ ಜಿಹ್ವೆ ಸಾರುವುದು ನಿನ್ನ ನೀತಿಯನು / ದಿನವೆಲ್ಲಾ ವರ್ಣಿಸುವುದು ನಿನ್ನ ಕೀರ್ತಿಯನು //

· © 2017 kannadacatholicbible.org Privacy Policy