1 : ಪ್ರಭುವನು ನಾ ಕೊಂಡಾಡುವೆ ಎಲ್ಲ
ಕಾಲದೊಳು /
ಆತನ ಸ್ತುತಿ ಸದಾ ಇಹುದು ನನ್ನ
ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ /
ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3 : ಬನ್ನಿ, ಕೊಂಡಾಡುವ ಪ್ರಭು ದೇವನನು /
ಘನಪಡಿಸೋಣ ಅವನ ಶ್ರೀನಾಮವನು //
4 : ಬೇಡಿಕೊಳ್ಳಲು ಕೊಟ್ಟನಾತ
ಸದುತ್ತರವನು /
ಭಯಭೀತಿಯಿಂದೆನ್ನನು ಮುಕ್ತ
ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು /
ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು
ಪ್ರಭು ಕಿವಿಗೊಟ್ಟನು /
ಸರ್ವಾಪತ್ತಿನಿಂದವನು ಮುಕ್ತಗೊಂಡನು //
7 : ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು /
ಕಾಯುವನು ಪ್ರಭುವಿನ ದೂತನೆ
ಬಂದಿಳಿದು //
8 : ಸವಿದು ನೋಡು ಪ್ರಭುವಿನ ಮಾಧುರ್ಯವನು /
ಆತನನು ಆಶ್ರಯಿಸಿಕೊಂಡವನು ಧನ್ಯನು //
9 : ದೇವಜನರೆ, ನಿಮಗಿರಲಿ ಪ್ರಭುವಿನ
ಭಯಭಕುತಿ /
ಅಂಥವರಿಗಿರದು ಯಾವ ಕುಂದುಕೊರತೆಯ
ಭೀತಿ //
10 : ಯುವ ಕೇಸರಿಗೆ ಇರಬಹುದು ಹಸಿವು, ದಾಹ /
ಪ್ರಭುವನು ಅರಸುವವರಿಗಿರದು ಒಳಿತಿನ
ಅಭಾವ //
11 : ಬನ್ನಿ ಮಿತ್ರರೇ, ಆಲಿಸಿರೀ ಮಾತನು /
ಕಲಿಸುವೆನು ನಾ ನಿಮಗೆ ದೇವ ಭಯವನು //
12 : ಎಲೈಮಾನವ, ಬಲುದಿನ ಬಾಳಲು
ಬಯಸುವೆಯಾ? /
ಆಯುರಾರೋಗ್ಯ ಭಾಗ್ಯವನು
ಆಶಿಸುವೆಯಾ?//
13 : ಕಾದಿಡು ನಾಲಿಗೆಯನು ಕೇಡನು ಆಡದಂತೆ /
ಬಿಗಿಯಿಡು ತುಟಿಯನ್ನು
ಕುಟಿಲವನು ನುಡಿಯದಂತೆ //
14 : ಬಿಡು ಕೆಟ್ಟದನು, ಮಾಡು ಒಳಿತನು /
ಹುಡುಕು ಶಾಂತಿಯನು, ಬೆನ್ನಟ್ಟು ಅದನು //
15 : ಸಜ್ಜನರನು ಪ್ರಭು ಕಟಾಕ್ಷಿಸುವನು /
ಅವರ ಮೊರೆಗಾತ ಕಿವಿಗೊಡುವನು //
16 : ದುರ್ಜನರಿಗಾದರೋ ಪ್ರಭು ವಿಮುಖನು /
ಅವರ ಹೆಸರನು ಧರೆಯಿಂದ ಅಳಿಸುವನು //
17 : ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ /
ನೆರವೀವನವರ ಕಷ್ಟನಿವಾರಣೆಗೆ //
18 : ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ /
ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19 : ಸಜ್ಜನನಿಗೊದಗುವ ಸಂಕಟಗಳು ವಿಪರೀತ /
ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
20 : ಕಾಪಾಡುವನು ಅವನೆಲಬುಗಳೆಲ್ಲವನ್ನೂ /
ಮುರಿಯಬಿಡನು ಪ್ರಭು ಅವುಗಳ
ಲ್ಲೊಂದನ್ನೂ //
21 : ದುರ್ಜನರೆಲ್ಲರೂ ತುತ್ತಾಗುವರು ತಮ್ಮ
ಕೇಡಿಗೆ /
ಸಜ್ಜನರ ಶತ್ರುಗಳು ಗುರಿಯಾಗುವರು
ದಂಡನೆಗೆ //
22 : ತನ್ನ ದಾಸರನು ಉದ್ಧಾರಮಾಡದಿರನು ಪ್ರಭು /
ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು //