1 : ಸಜ್ಜನರೇ, ಮಾಡಿರಿ ಪ್ರಭುವಿನ
ಗುಣಗಾನ /
ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ //
2 : ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ / ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ //
3 : ನೂತನ ಕೀರ್ತನೆಯನು ಆತನಿಗೆ ಹಾಡಿರಿ /
ಇಂಪಾಗಿ ಬಾರಿಸಿ, ಸೊಂಪಾಗಿ ಭಜಿಸಿರಿ //
4 : ಸತ್ಯವಾದುದು ಆತನ ಪವಿತ್ರ ವಾಕ್ಯ /
ಸ್ತುತ್ಯವಾದುದು ಆತನ ಪುನೀತ ಕಾರ್ಯ //
5 : ಸತ್ಯಸಂಧನು, ನ್ಯಾಯಪ್ರಿಯನು ಆತನು |
ಅಚಲ ಪ್ರೀತಿಯಿಂದ ಜಗವನು ತುಂಬಿಹನು ||
6 : ಸೃಷ್ಟಿಯಾಯಿತು ಗಗನ ಮಂಡಲ ಆತನ
ನುಡಿಯೊಂದಕೆ /
ರೂಪುಗೊಂಡಿತು ತಾರಾ ಮಂಡಲ ಅವನುಸಿರು
ಮಾತ್ರಕೆ //
7 : ತುಂಬಿಟ್ಟಿಹನು ಜಲರಾಶಿಗಳನು ಕಡಲೆಂಬ
ಕುಡಿಕೆಯಲಿ /
ಕೂಡಿಟ್ಟಿಹನು ಜಲಾಶಯಗಳನು
ಬುವಿಯುಗ್ರಾಣದಲಿ //
8 : ಪೊಡವಿಯೆಲ್ಲವು ಭಯಪಡಲಿ ಪ್ರಭುವಿಗೆ /
ಅಡಗಿ ನಡೆಯಲಿ ನಾಡಿಗರೆಲ್ಲ ಆತನಿಗೆ //
9 : ಸೃಷ್ಟಿಯಾಯಿತು ಆತನ ನುಡಿ ಮಾತ್ರಕೆ /
ಸ್ಥಾಪನೆಯಾಯಿತು ಅವನ ಅಣತಿಯೊಂದಕೆ //
10 : ವ್ಯರ್ಥವಾಗಿಪನು ಪ್ರಭು ರಾಷ್ಟ್ರ
ಯೋಜನೆಗಳನು /
ನಿರರ್ಥಕವಾಗಿಪನು ಜನರ ದುಷ್ಟ
ಸಂಕಲ್ಪಗಳನು //
11 : ಪ್ರಭುವಿನ ಯೋಜನೆ ಶಾಶ್ವತ /
ಅವನ ಸಂಕಲ್ಪ ಅನವರತ //
12 : ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ /
ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ //
13 : ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ /
ಲಕ್ಷಿಸುತಿಹನು ಮನುಜರನು
ಸಿಂಹಾಸನದಿಂದ //
14 : ಸ್ಥಾವರ ಸಿಂಹಾಸನದಿಂದ ನೋಡುತಿಹನು / ಸರ್ವ ಭೂನಿವಾಸಿಗಳನು ಪರಿಶೀಲಿಸು ತಿಹನು //
15 : ಅವರೆಲ್ಲರ ಹೃದಯಗಳನು
ನಿರ್ಮಿಸಿದಾತನವನು /
ಅವರವರ ಕೃತ್ಯಗಳನು ಪರೀಕ್ಷಿಸುತಿಹನು //
16 : ಅರಸನಾವನು ವಿಜೇತನಾಗನು
ಮಹಾ ಸೇನಾಬಲದಿಂದಲೆ /
ಶೂರನಾವನು ಜಯಶೀಲನಾಗನು
ಕೇವಲ ಭುಜಬಲದಿಂದಲೆ //
17 : ಪ್ರಾಣರಕ್ಷಣೆಗೆ ಸಾಲದು ಅಶ್ವದಳ /
ಆತ್ಮರಕ್ಷಣೆಗೆ ಬಾರದು ಅಶ್ವಬಲ //
18 : ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ
ನಡೆದವರನು /
ಲಕ್ಷಿಸುವನು ತನ್ನ ಕೃಪೆಯನು
ನಿರೀಕ್ಷಿಸುವವರನು //
19 : ತಪ್ಪಿಸುವನವನು ಪ್ರಾಣವನು ಮರಣದಿಂದ /
ಉಳಿಸುವನು ಜೀವವನು
ಕ್ಷಾಮಡಾಮರದಿಂದ //
20 : ಕಾದಿದೆ ಎನ್ನ ಮನ ಪ್ರಭುವಿಗಾಗಿ /
ಆತನಿಹನು ಎನಗೆ ಗುರಾಣಿಯಾಗಿ //
21 : ನೆಮ್ಮದಿಯಿಂದಿದೆ ಎನ್ನ ಮನ ಆತನಲಿ /
ನಂಬಿರುವೆವು ಆತನ ಶ್ರೀ ನಾಮದಲಿ //
22 : ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ /
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //