1 : ಯಾರ ಪಾಪ ಪರಿಹಾರವಾಗಿದೆಯೋ /
ಯಾರ ದ್ರೋಹ
ವಿಮೋಚನೆಯಾಗಿದೆಯೋ - ಅವರೇ
ಧನ್ಯರು //
2 : ಯಾರಪರಾಧವನು ಪ್ರಭು ಎಣಿಸಿಲ್ಲವೋ /
ಯಾರಂತರಂಗದಲಿ ಕುತಂತ್ರವಿಲ್ಲವೋ
ಅವರೇ ಧನ್ಯರು //
3 : ಪಾಪ ನಿವೇದನೆ ಮಾಡದೆ ನಾ
ಮೌನದಿಂದಿರಲು
ದಿನವೆಲ್ಲ ನರಳಿ ಸವೆದು ಹೋದವು
ನನ್ನೆಲುಬುಗಳು //
4 : ಪ್ರಭುವಿನ ಶಿಕ್ಷಾಹಸ್ತ ನನ್ನ ಮೇಲೆ
ಭಾರವಾಗಿತ್ತು ಹಗಲಿರುಳು /
ಬೇಸಿಗೆಯ ನೀರಿನಂತೆ ಬತ್ತಿ ಹೋಗಿತ್ತು
ನನ್ನ ಶರೀರದ ತಿರುಳು //
5 : ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು /
ಮರೆಮಾಡಲಿಲ್ಲ ನಿನ್ನಿಂದ ನನ್ನ
ದ್ರೋಹವನು //
“ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ”
ಎಂದೆನು /
ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು //
6 : ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ
ಸಕಾಲದಲಿ /
ಹುಚ್ಚುಹೊಳೆ ಉಕ್ಕಿಬಂದಾಗ ನೀ
ಸಿಕ್ಕಲಿಲ್ಲವೆನ್ನದಿರಲಿ //
7 : ನೀನೆ ನನಗೆ ಮರೆಯು, ಆಪತ್ತಿನಲಾಸರೆಯು /
ನನ್ನನು ಆವರಿಸುವ ಉದ್ದಾರಕ ನಾದವು //
8 : ಪ್ರಭು ಇಂತೆಂದನು :
“ಕಲಿಸುವೆನು, ನಾ ನಿನಗೆ ತಿಳಿಸುವೆನು
ಸನ್ಮಾರ್ಗವನು /
ಕಟಾಕ್ಷಿಸಿ ನಿನ್ನನು, ಈವೆನು
ಸದಾಲೋಚನೆಯನು //
9 : ‘ಬುದ್ಧಿಹೀನರಾಗದಿರಿ ಕತ್ತೆ ಕುದುರೆಗಳಂತೆ /
ಸ್ವಾಧೀನವಾಗವವು ಕಟ್ಟುಕಡಿವಾಣ
ವಿಲ್ಲದೆ’//
10 : ‘ದುಷ್ಟರ ಕಷ್ಟನಷ್ಟಗಳು ಅನೇಕ /
ಪ್ರಭುವನು ನಂಬಿದವರ ಸುತ್ತ ಮರುಕ’”//
11 : ಸಜ್ಜನರೇ ಸಂತೋಷಿಸಿರಿ, ಉಲ್ಲಾಸಿಸಿರಿ
ಪ್ರಭುವಿನಲಿ /
ಯಥಾರ್ಥಚಿತ್ತರೇ, ಜಯಕಾರಮಾಡಿ ಆತನ
ವಿಷಯದಲಿ //