1 : ನಿನಗೆನ್ನ ವಂದನೆ ಪ್ರಭು, ನನ್ನನುದ್ಧರಿಸಿದೆ / ಶತ್ರುಗಳೆನ್ನ ಕುರಿತು ಹಿಗ್ಗದಂತೆ ಮಾಡಿದೆ //
2 : ‘ಹೇ ಪ್ರಭು, ಎನ್ನ ದೇವಾ’ ಎಂದೆ / ನಾ ಮೊರೆಯಿಡೆ, ನೀ ಗುಣಪಡಿಸಿದೆ //
3 : ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ / ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ //
4 : ಭಕ್ತರೇ, ಸಂಕೀರ್ತಿಸಿರಿ ಪ್ರಭುವನು / ಮಾಡಿರಿ ಆತನ ನಾಮಸ್ಮರಣೆಯನು //
5 : ಆತನ ಕೋಪ ಕ್ಷಣಮಾತ್ರ /
ಆತನ ಕೃಪೆ ಜೀವನ ಪರಿಯಂತ //
ಇರುಳು ಬರಲು ಇರಬಹುದು ಅಳಲು /
ನಲಿವು ಉಲಿವುದು ಹಗಲು ಹರಿಯಲು //
6 : ನಾನಾದರೋ ಉಲ್ಲಾಸದಿಂದಿರುವಾಗಲೂ /
ನನ್ನನು ಅಲ್ಲಾಡಿಸಲಾಗದೆಂದೆ
ಯಾರಿಂದಲೂ //
7 : ಪ್ರಭು, ನಿನ್ನ ಕೃಪೆ ನನ್ನ ಗುಡ್ಡಕೆ ಅಡಿಬಂಡೆ /
ನಿನ್ನ ಮುಖ ಮರೆಯಾದುದೆ ನಾ
ಕಳವಳಗೊಂಡೆ //
8 : ಹೇ ಪ್ರಭು, ಮೊರೆಯಿಟ್ಟೆನು ನಿನಗೆ /
ಬಿನ್ನವಿಸಿದೆನು ನನ್ನೊಡೆಯನಿಗೆ //
9 : “ನನ್ನ ಪ್ರಾಣ ನಷ್ಟದಿಂದ ನಿನಗೇನು ಫಲ? /
ಸಮಾಧಿಗೆ ನಾನಿಳಿದರೆ ನಿನಗೇನು ಲಾಭ?”//
“ಸತ್ತವರ ಬೂದಿ ನಿನ್ನ ಸ್ತುತಿಸಬಲ್ಲುದೆ?/
ನಿನ್ನ ಸತ್ಯತೆಯನ್ನದು ಸಾರಲು ಬಲ್ಲುದೆ?”//
10 : “ಆಲಿಸು ಪ್ರಭು, ಕರುಣಿಸು, ನೆರವಾಗು
ಬೇಗ”/
ಎಂದು ಪ್ರಭು ನಾನಿನ್ನನು ಪ್ರಾರ್ಥಿಸಿದಾಗ /
11 : ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ /
ಎನ್ನ ಗೋಣಿತಟ್ಟನು
ಹರ್ಷಾಭರಣವಾಗಿಸಿದೆ //
12 : ಎಂದೇ ಮೌನವಿರದೆ ಎನ್ನ ಮನವು ನಿನಗೆ
ಹಾಡಲಿ ಕೀರ್ತನೆ /
ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ
ಧನ್ಯ ವಂದನೆ //