1 : ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ /
ನಾನಾರಿಗೂ ಅಳುಕೆನು //
ನನ್ನ ಬಾಳಿಗಾಧಾರ ಪ್ರಭುವೆ /
ನಾನಾರಿಗೂ ಅಂಜೆನು //
2 : ಕೇಡು ಮಾಡಬಂದರೆನಗೆ ಕೊಲೆಗಡುಕರು /
ಎಡವಿಬಿದ್ದರು, ತಾವೇ ಅಳಿದುಹೋದರು //
3 : ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು /
ಸಮರಕ್ಕೆರಗಿದರೂ ನಾ
ಭರವಸೆಯಿಂದಿರುವೆನು //
4 : ನಾನೊಂದನು ಕೋರಿದೆ ಪ್ರಭುವಿನಿಂದ /
ನಾನದನ್ನೇ ನಿರೀಕ್ಷಿಸಿದೆ ಆತನಿಂದ : /
ವಾಸಿಸಬೇಕು ಜೀವಮಾನವೆಲ್ಲ ನಾನಾತನ
ಮಂದಿರದಲಿ /
ನಾ ತಲ್ಲೀನನಾಗಬೇಕು ಅಲ್ಲಾತನ-
ಪ್ರಸನ್ನತೆಯಲಿ //
5 : ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ
ಗುಡಾರದಲಿ /
ಇರಿಸುವನು ಮರೆಯಾಗಿ ಗರ್ಭಗುಡಿಯಲಿ,
ಸುರಕ್ಷಿತ ಶಿಖರದಲಿ //
6 : ಸುತ್ತಲು ನೆರೆದಿಹ ಶತ್ರುಗಳ ನಡುವೆ ತಲೆಯೆತ್ತಿ
ನಡೆವೆನು /
ದೇವಾಲಯದೊಳು ಜಯಜಯ ಘೋಷ
ದೊಡನೆ ಬಲಿಗಳನರ್ಪಿಸುವೆನು /
ಪ್ರಭುವಿಗೆ ಹಾಡುವೆನು, ವಾದ್ಯ ನುಡಿಸುತ
ಕೊಂಡಾಡುವೆನು //
7 : ಪ್ರಭೂ, ನಿನಗೆ ಮೊರೆಯಿಡುವೆನು /
ಕರುಣಿಸೆನಗೆ ಸದುತ್ತರವನು //
8 : “ಅರಸೆನ್ನ ಮುಖದರುಶನವನು”, ಎಂದೆ
ನೀನು /
“ಅರಸುವೆನು ಅದನೆ”, ಎಂದು ಮರುನುಡಿದೆ
ನಾನು //
9 : ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ
ತಳ್ಳಬೇಡಯ್ಯಾ /
ರಕ್ಷಕದೇವಾ, ಎನಗೆ ಸಹಾಯಕಾ, ದಾಸನ
ಕೈಬಿಡಬೇಡಯ್ಯಾ //
10 : ಹೆತ್ತವರು ತೊರೆದುಬಿಟ್ಟರೇನು /
ಕರ್ತನು ಪೊರೆಯದಿರನು ನನ್ನನು //
11 : ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು /
ಶತ್ರುರಹಿತ ಹಾದಿಯಲಿ ನಡೆಸು ಎನ್ನನು //
12 : ತಳ್ಳಬೇಡೆನ್ನನು ವೈರಿಗಳ ವಶಕ್ಕೆ /
ಸುಳ್ಳುಸಾಕ್ಷಿಗಳು, ಕ್ರೂರಿಗಳವರೆನಗೆ //
13 : ಪ್ರಭುವಿನೊಳಿತನು ನಾ ಕಾಣುವೆ
ಜೀವಲೋಕದೊಳು /
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //
14 : ಪ್ರಭುವನು ಎದುರುನೋಡುತ್ತಿರು ಮನವೇ /
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //