1 : ಸಾಚವಾದುದೆನ್ನ ನಡತೆ,
ಅಚಲವಾದುದೆನ್ನ ನಂಬುಗೆ /
ನೀಚ ನಾನಲ್ಲವೆಂದು ಪ್ರಭು, ನ್ಯಾಯ
ತೀರಿಸೆನಗೆ //
2 : ಪರೀಕ್ಷಿಸು ಪ್ರಭು, ಎನ್ನನು ಪರಿಶೀಲಿಸು /
ಹೃನ್ಮನಗಳೆಲ್ಲವನು ನೀ ಪರಿಶೋಧಿಸು //
3 : ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ /
ನೀ ತೋರಿದ ಸತ್ಯ ಪಥದಲಿ, ನಾ ನಡೆದೆ //
4 : ದುಷ್ಟರ ಕೂಟದಲಿ ನಾ ಕೂರುವವನಲ್ಲ /
ಕಪಟಿಗಳ ಸಂಘವನು ನಾ ಸೇರುವವನಲ್ಲ //
5 : ದುರ್ಜನರ ಸಹವಾಸವದು ನನಗಸಹ್ಯ /
ದುರುಳರೊಡನಾಟ ನನಗೆ ಬೇಡವಯ್ಯಾ //
6 : ನಿರ್ದೋಷಿ ನಾನೆಂದು ನೀರಿನಲ್ಲಿ
ಕೈತೊಳೆವೆನಯ್ಯಾ /
ಪ್ರಭು, ನಿನ್ನ ಬಲಿಪೀಠದ ಪ್ರದಕ್ಷಿಣೆ
ಮಾಡುವೆನಯ್ಯಾ //
7 : ದನಿಯೆತ್ತಿ ನಿನಗೆ ಧನ್ಯಗೀತೆ ಹಾಡುವೆನಯ್ಯಾ /
ನಿನ್ನದ್ಭುತ ಕಾರ್ಯಗಳೆಲ್ಲವನು
ಘೋಷಿಸುವೆನಯ್ಯಾ //
8 : ಪ್ರಿಯವಾದುದೆನಗೆ ನಿನ್ನ ನಿವಾಸದ ಮಂದಿರ /
ಸುಪ್ರೀತವಾದುದು ನಿನ್ನ ಮಹಿಮೆಯ ಆಗರ //
9 : ಪಾಪಿಗಳ ಸಮೇತ ಎನ್ನ
ಪ್ರಾಣವನಳಿಸಬೇಡಯ್ಯಾ /
ಕೊಲೆಪಾತಕರ ಸಮೇತ ಎನ್ನ
ಜೀವ ತೆಗೆಯಬೇಡಯ್ಯಾ /
10 : ಇದೆ ಆ ಜನರ ಕೈಗಳಲಿ ಕೆಡುಕುತನ /
ಬಲಗೈ ತುಂಬ ಲಂಚಕೋರತನ //
11 : ನೀತಿಯ ಪಥದೊಳು ನಾ ನಡೆವೆನಯ್ಯಾ /
ಕರುಣೆ ತೋರುತ ಪ್ರಭು, ರಕ್ಷಿಸಯ್ಯಾ //
12 : ಸಮತಳದಲಿ ನಿಂತಿವೆ ನನ್ನ ಪಾದಗಳು /
ಸ್ತುತಿಸುವೆ ನಾ ಪ್ರಭುವನು ಭಕ್ತರ
ಸಭೆಯೊಳು //