1 : ಅರಸಗೆ ಹರ್ಷವಾಯಿತು ಪ್ರಭು,
ನೀ ತೋರಿದ ಪರಾಕ್ರಮಕ್ಕಾಗಿ /
ಪರಮಾನಂದಗೊಂಡನವನು, ನೀನಿತ್ತ
ವಿಜಯೋತ್ಸವಕ್ಕಾಗಿ //
2 : ಆತನ ಮನದಾಸೆಯನು ನೀ ಪೂರೈಸಿದೆ /
ಆತನಧರ ಬಯಕೆಯನು ಅನುಗ್ರಹಿಸಿದೆ //
3 : ನೀನಾತನನು ಸ್ವಾಗತಿಸಿದೆ ಶುಭಾಶಯ ದೊಂದಿಗೆ / ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ //
4 : ಕೋರಿದನಾತನು ಜೀವಮಾನಕಾಲವನು /
ನೀನಿತ್ತೆ ಯುಗಯುಗಾಂತರ
ದಾಯುಷ್ಯವನು //
5 : ನಿನ್ನ ನೆರವಿಂದೇರಿತು ಆತನ ಘನತೆ /
ಶೋಭೆ, ಪ್ರಭಾವಗಳ ನೀನವನಿಗಿತ್ತೆ //
6 : ಅಮರ ಭಾಗ್ಯಗಳನು ನೀನನುಗ್ರಹಿಸಿದೆ /
ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ //
7 : ಅರಸನಿಗಿದೆ ಭರವಸೆ ಪ್ರಭುವಿನಲಿ /
ಅವನಚಲನು, ಪರಾತ್ಪರನ ಕೃಪೆಯಲಿ //
8 : ಶತ್ರುಗಳೆಲ್ಲರು ಸಿಕ್ಕಿ ಹೋಗುವರು ನಿನ್ನ ಕೈಗೆ /
ಹಗೆಗಳೆಲ್ಲ ಸಿಕ್ಕಿ ಬೀಳುವರು ನಿನ್ನ
ಬಲಗೈಗೆ //
9 : ಅಗ್ನಿಕುಂಡವಾಗುವರವರು ನೀ
ಪ್ರತ್ಯಕ್ಷನಾದಾಗ /
ಕಬಳಿಸುವುದು ಕೋಪಾಗ್ನಿ, ಭಸ್ಮವಾಗ್ವರು
ಪ್ರಭು ಬಂದಾಗ //
10 : ನಿರ್ಮೂಲಮಾಡುವೆ ನೀನವರ ಸಂತಾನವನು
ಧರೆಯಿಂದ /
ಕುಡಿಯಿಲ್ಲದಾಗಿಸುವೆ ಅವರನು ಮಾನವರ
ಮಧ್ಯದಿಂದ //
11 : ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು /
ಕೇಡನು ನಿನಗೆ ಬಗೆದರೂ ಅದು ಕೈಗೂಡದು //
12 : ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ /
ಬೆನ್ನು ಮಾಡಿ ಅವರೋಡುವಂತೆ ಮಾಡುವೆ //
13 : ಹೇ ಪ್ರಭು, ಪರಾಕ್ರಮ ತೋರಿ,
ಪರಮಪದಗಳಿಸಿಕೊ /
ಕೀರ್ತಿಸುತ ನಿನ್ನ ಸಾಮಥ್ರ್ಯವನು,
ಪೊಗಳುವೆನಿದೊ /