1 : ಸಂಕಟ ಬಂದಾಗ, ಪ್ರಭು ನಿನಗೆ
ಕಿವಿಗೊಡಲಿ /
ಯಕೋಬ ದೇವರ ನಾಮ, ನಿನ್ನ ಕಾಪಾಡಲಿ //
2 : ನೆರವು ನೀಡಲಾತ ಪವಿತ್ರಾಲಯದಿಂದ /
ನಿನಗೊತ್ತಾಸೆ ಬರಲಿ, ಸಿಯೋನ್
ಶಿಖರದಿಂದ //
3 : ನೆನಸಿಕೊಳ್ಳಲಾತ ನೀನರ್ಪಿಸಿದ ಕಾಣಿಕೆಗಳನು /
ಒಲಿದು ಸ್ವೀಕರಿಸಲಿ, ನೀನಿತ್ತಾ
ಯಜ್ಞಬಲಿಗಳನು //
4 : ನೆರವೇರಿಸಲಿ ಆತ ನಿನ್ನಿಷ್ಟಾರ್ಥಗಳನು /
ಪೂರೈಸಲಿ ಪ್ರಭು ನಿನ್ನಭೀಪ್ಸೆಗಳೆಲ್ಲವನು //
5 : ಜಯಘೋಷ ಮಾಡುವೆವು, ನಿನ್ನ ಗೆಲುವಿನ
ನಿಮಿತ್ತ /
ಧ್ವಜ ಹಾರಿಪೆವು, ಎಮ್ಮ ದೇವನ ನಾಮದ
ನಿಮಿತ್ತ /
ನಿನ್ನ ಕೋರಿಕೆಗಳೆಲ್ಲವನು, ಕೈಗೂಡಿಸಲಿ ಆತ //
6 : ಒದಗುವನು ಪ್ರಭುವು ಅಭಿಷಿಕ್ತನಿಗೆ /
ಓಗೊಡುವನು ಸ್ವರ್ಗದಿಂದಾತನಿಗೆ /
ಗೆಲುವನೀವನು ಭುಜಬಲದಿಂದವನಿಗೆ //
7 : ಹೆಚ್ಚಳಪಡುತಿಹರು ಕೆಲವರು ರಥಗಳಲಿ,
ಹಲವರು ಅಶ್ವಗಳಲಿ /
ಹೆಮ್ಮೆಪಡುತಿಹೆವು ನಾವಾದರೋ, ನಮ್ಮ
ದೇವರ ನಾಮದಲಿ //
8 : ಕೆಳಗಿಳಿವರವರು, ಕುಸಿದು ಬೀಳುವರವರು /
ಏಳುವೆವು, ಸ್ಥಿರನಿಲ್ಲುವೆವು ನಾವೆಲ್ಲರು //
9 : ಜಯವ ನೀಡು ಪ್ರಭು, ಅರಸನಿಗೆ /
ಕಿವಿಗೊಡು ನೀ, ನಮ್ಮ ಪ್ರಾರ್ಥನೆಗೆ //