1 : ಆಕಾಶಮಂಡಲ ಸಾರುತಿದೆ ದೇವರ
ಮಹಿಮೆಯನು /
ತಾರಾಮಂಡಲ ತೋರುತಿದೆ ದೇವರ
ಕೈಕೃತಿಗಳನು //
2 : ದಿನವು ಮರುದಿನಕೆ ಮಾಡುತಿದೆ ಈ
ಪ್ರಕಟಣೆಯನು |
ರಾತ್ರಿ ಮರುರಾತ್ರಿಗೆ ನೀಡುತಿದೆ ಈ
ಪ್ರಚಾರವನು ||
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ /
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ //
4 : ಆದರೂ ಅವುಗಳ ಧ್ವನಿರೇಖೆ ಹರಡಿದೆ
ಬುವಿಯಾದ್ಯಂತ /
ಅವುಗಳ ನುಡಿಮಾತು ವ್ಯಾಪಿಸಿದೆ
ಜಗದಾದ್ಯಂತ //
5 : ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು
ಸೂರ್ಯನಿಗೆ /
ಬರುತಿಹನಾ ರವಿ ವರನಂತೆ ಧಾರಾಗೃಹದಿಂದ
ಹೊರಗೆ /
ಶೂರನಂತೆ, ಓಟದ ಪಥದಲ್ಲೋಡಲು
ಹರುಷದೊಂದಿಗೆ //
6 : ಏರುತಿಹನು ದಿಗಂತದೊಂದು ಕೊನೆಯಿಂದ
ಮತ್ತೊಂದು ಕೊನೆಗೆ |
ಮುಚ್ಚುಮರೆಯಾದುದೊಂದೂ ಇರದು,
ಆತನಾ ಉರಿಗಣ್ಣಿಗೆ ||
7 : ಪ್ರಭುವಿನ ಆಜ್ಞೆ ಪರಿಪೂರ್ಣ;
ಜೀವನಕದು ನವಚೇತನ /
ನಂಬಲರ್ಹ; ಪ್ರಭುವಿನ ಶಾಸನ
ಮುಗ್ಧರಿಗದು ಸುಜ್ಞಾನ //
8 : ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು
ಒಸಗೆ /
ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು
ದೀವಿಗೆ //
9 : ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ
ಶಾಶ್ವತ /
ಪ್ರಭುವಿನ ತೀರ್ಪು ಯಥಾರ್ಥ; ಪರಿಪೂರ್ಣ
ನ್ಯಾಯಯುತ //
10 : ಅಪೇಕ್ಷಣೀಯವಾದುವವು ಚಿನ್ನ
ಅಪರಂಜಿಗಿಂತ /
ಅತಿಮಧುರವಾದುವು ಅಪ್ಪಟ
ಜೇನುತುಪ್ಪಕ್ಕಿಂತ //
11 : ಜಾಗೃತಗೊಳ್ಳುವನು ನಿನ್ನ ದಾಸನು
ಅವುಗಳಿಂದ /
ಸಂಭಾವಿತನಾಗುವನು ಅವುಗಳ
ಪಾಲನೆಯಿಂದ //
12 : ತನ್ನ ತಪ್ಪನು ತಾನರಿತುಕೊಳ್ಳುವವನಾರಯ್ಯಾ /
ಗುಪ್ತವಾದ ಪಾಪಗಳಿಂದೆನ್ನ
ಮುಕ್ತಗೊಳಿಸಯ್ಯಾ //
13 : ಕಾಪಾಡೆನ್ನನು, ಬೇಕು ಬೇಕೆಂದು
ಪಾಪಮಾಡದಂತೆ /
ಕಾದಿಡು, ಅಂಥ ಪಾಪಕೆ ನಾ ದಾಸನಾಗದಂತೆ /
ನಿರ್ದೋಷಿಯಾಗುವೆನು, ಆ
ದ್ರೋಹಕ್ಕೊಳಗಾಗದಂತೆ //
14 : ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು,
ಹೃದಯಧ್ಯಾನ
ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯ
ಧಾಮ//