1 : ಪ್ರಭುವೇ, ನೀನೆ ನನ್ನ ಬಲವು /
ನನಗಿದೆ ನಿನ್ನಲೇ ಒಲವು /
2 : ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ / ಆತನೇ ನನ್ನ ದೇವ, ನನ್ನಾಶ್ರಯ ದುರ್ಗ / ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ //
3 : ಪ್ರಭು ಸ್ತುತ್ಯಾರ್ಹನು /
ಶತ್ರುಗಳಿಂದ ಕಾಪಾಡುವನು,
ನಾನವಗೆ ಮೊರೆಯಿಡಲು //
4 : ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು / ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು //
5 : ಆವರಿಸಿಕೊಂಡವು ಪಾತಾಳ ಪಾಶಗಳು |
ನನ್ನ ಕಣ್ಮುಂದಿದ್ದವು ಮರಣಕರ
ಉರುಲುಗಳು ||
6 : ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ
ಪ್ರಭುವಿಗೆ /
ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ /
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ //
7 : ಆಗ ಕಂಪಿಸಿತು ಭೂಮಿ ಗಡಗಡನೆ /
ಕದಲಿದವು ಬೆಟ್ಟದ ಬುಡಗಳು ಮಿಲಮಿಲನೆ /
ಏಕೆನೆ, ಸಿಟ್ಟೇರಿತ್ತು ಆತನಿಗೆ //
8 : ಹೊರಬಂದಿತು ಹೊಗೆ ಆತನ ಮೂಗಿಂದ /
ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ /
ಕಾದುಕೆಂಡವಾಗಿಸಿತದು ಎದುರಿಗೆ
ಸಿಕ್ಕಿದ್ದನೆಲ್ಲ //
9 : ಆಕಾಶವನೆ ಬಾಗಿಸಿ ಆತನಿಳಿದು ಬರಲು /
ಸೇರಿತು ಆತನ ಕಾಲಡಿ ಕಾರ್ಮುಗಿಲು //
10 : ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ |
ಇಳಿದು ಬಂದನು ವಾಯುರೆಕ್ಕೆಗಳ
ವೇಗದಲಿ ||
11 : ಕತ್ತಲನು ಕವಿಸಿಕೊಂಡನು ಸುತ್ತಲು
ಛತ್ರಾಂಬರದೊಳು |
ಮರೆಯಾದನು ಜಲಮಯ ನೀಲಮೇಘಗಳ
ಮಧ್ಯದೊಳು ||
12 : ಹೊಳೆಯಿತು ಮಿಂಚು ಆತನ ತೇಜದ
ಸನ್ನಿಧಿಯಿಂದ /
ಸುರಿಯಿತು ಕಲ್ಮಳೆ, ಉರಿಗೆಂಡ
ಕಾರ್ಮೋಡಗಳಿಂದ //
13 : ಗುಡುಗಿದನು ಸರ್ವೇಶ್ವರ ಗಗನ
ಮಂಡಲದಿಂದ /
ಮೊಳಗಿತು ವಾಣಿ ಆ ಪರಾತ್ಪರನ
ವದನದಿಂದ /
ಸುರಿಯಿತಿದೋ ಕಲ್ಮಳೆ, ಉರಿಗೆಂಡ
ಮೇಲಿಂದ //
14 : ಚದರಿಸಿದನು ಶತ್ರುಗಳನು ಬಾಣಗಳನ್ನೆಸೆದು /
ತಳಮಳಗೊಳಿಸಿದನವರನು ಸಿಡಿಲನು
ಹೊಡೆದು //
15 : ಪ್ರಭು, ನಿನ್ನ ಗದರಿಕೆಯಿಂದ, ನಿನ್ನಾ
ಶ್ವಾಸಭರದಿಂದ /
ಕಾಣಿಸಿಕೊಂಡಿತು ಇಂಗಿಹೋದ
ಸಮುದ್ರದ ತಳ /
ತೋರಿಬಂದಿತು ಭೂಲೋಕದ ಅಸ್ತಿಭಾರ //
16 : ಮೇಲಣಲೋಕದಿಂದ ಹಿಡಿದುಕೊಂಡನು
ಕೈಚಾಚಿ /
ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು
ಕೈನೀಡಿ //
17 : ಬಿಡಿಸಿ ರಕ್ಷಿಸಿದನೆನ್ನಾ ಶತ್ರುಗಳಿಂದ /
ನನಗಿಂತ ಪುಷ್ಟ, ಬಲಿಷ್ಟ ಹಗೆಗಳಿಂದ //
18 : ನನ್ನ ಮೇಲೆರಗಿದ್ದರೂ ಹಗೆಗಳು
ದುರಂತಕಾಲದಲಿ /
ನನಗುದ್ಧಾರಕನಾದ ಪ್ರಭು,
ಆ ವಿಪತ್ಕಾಲದಲಿ //
19 : ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ /
ಅಕ್ಕರೆಯಿಂದ ಮೆಚ್ಚಿ ರಕ್ಷಕನಾದ ನನಗೆ //
20 : ನನಗೊಳಿತು ಮಾಡಿದನಾತ ಸನ್ನಡತೆಗೆ
ತಕ್ಕಂತೆ /
ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ
ತಕ್ಕಹಾಗೆ //
21 : ದೇವರನು ತೊರೆದು ದುರುಳನಾಗದೆ /
ನಾನನುಸರಿಸಿದೆ ಪ್ರಭುವಿನ ಮಾರ್ಗವನೆ //
22 : ಆತನ ವಿಧಿನಿಯಮಗಳನು ಅಲಕ್ಷ್ಯಮಾಡದೆ /
ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಗಳ
ಮುಂದೆ //
23 : ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ /
ಆತನ ದೃಷ್ಟಿಯಲಿದ್ದೆ ನಿರ್ದೋಷಿಯಾಗಿ //
24 : ನಾ ನೀತಿವಂತ, ನಿರಪರಾಧಿಯೆಂದರಿತು /
ನನಗಿತ್ತನಾ ಪ್ರಭು ತಕ್ಕ ಪ್ರತಿಫಲವನು /
25 : ಕರುಣೆಯುಳ್ಳವನಿಗಾತ ಕರುಣಾಮಯಿ /
ದೋಷರಹಿತನಿಗಾತ ನಿರ್ದೋಷಿ //
26 : ಶುದ್ಧನಿಗಾತ ಪರಿಶುದ್ಧನು /
ಮೂರ್ಖನಿಗಾತ ಮಹಾವಕ್ರನು //
27 : ದೀನದಲಿತರನು ಉದ್ಧರಿಸುವವನು ನೀನು /
ತಗ್ಗಿಸಿಬಿಡುವೆಯಲ್ಲವೆ ಪ್ರಭು, ಸೊಕ್ಕಿನ
ಲೋಚಕರನು?//
28 : ಹೊತ್ತಿಸುವೆ ಪ್ರಭು, ನೀನೆನ್ನ ಬಾಳಿನ
ದೀಪವನು /
ಕತ್ತಲನು ನೀಗಿಸಿ ಜ್ಯೋತಿ ಬೆಳಗುವನಾ
ದೇವನು //
29 : ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನಮೇಲೆ
ಬೀಳಬಲ್ಲೆ /
ದೇವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ
ಹಾರಬಲ್ಲೆ //
30 : ದೇವರ ಮಾರ್ಗ ದೋಷರಹಿತ /
ಸರ್ವೇಶ್ವರನ ವಚನ ಪರಮಪುನೀತ /
ಆಶ್ರಿತರೆಲ್ಲರಿಗಾತ ರಕ್ಷಣಾಕವಚ //
31 : ಪ್ರಭುವಲ್ಲದೆ ಇನ್ನಾವ ದೇವರುಂಟು?/
ನಮ್ಮ ದೇವನಲ್ಲದೆ ಉದ್ದಾರಕನೆಲ್ಲುಂಟು?//
32 : ನಡುಕಟ್ಟಾಗಿ ನನಗೆ ಬಿಗಿದಿದ್ದಾನೆ ಶೌರ್ಯ /
ಆತನಿಂದಲೇ ಸರಾಗ ನನ್ನ ಮಾರ್ಗ //
33 : ನನಗಿತ್ತನಾತ ಹುಲ್ಲೆಯಂತ ಮೊನೆಗಾಲು
ಎನ್ನ ಬಿಗಿ ನಿಲ್ಲಿಸಿದ ಮಲೆಗಳ ಮೇಲೂ //
34 : ಯುದ್ಧವಿದ್ಯೆಯ ಕಲಿತೆ ಆತನಿಂದಲೆ /
ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ //
35 : ನನ್ನ ಪರ ನೀನೇ ಗುರಾಣಿ ಹಿಡಿದು
ರಕ್ಷಿಸಿದೆ /
ನಿನ್ನ ಬಲಗೈ ನನಗೆ ಆಧಾರವಾಗಿದೆ /
ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ //
36 : ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ /
ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ //
37 : ಹಿಡಿದುಕೊಳ್ವೆನು ಶತ್ರುಗಳನು ಬೆನ್ನಟ್ಟಿ / ಅವರನು ನಿರ್ಮೂಲ ಮಾಡದೆ ಬರೆನು ಹಿಂತಿರುಗಿ //
38 : ಅವರನು ಮತ್ತೆ ಏಳದಂತೆ ಹೊಡೆದೆ /
ಅವರು ಕಾಲಿಗೆ ಬೀಳುವಂತೆ ಮಾಡಿದೆ //
39 : ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ
ನಡುಕಟ್ಟು /
ತಗ್ಗಿಸಿದೆ ಎದುರಾಳಿಗಳನು ನನಗಧೀನ
ಮಾಡಿಬಿಟ್ಟು //
40 : ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು /
ಆ ಹಗೆಗಳನು ನಿರ್ಮೂಲ ಮಾಡಿದೆ ನಾ
ಗುರಿಯಿಟ್ಟು //
41 : ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ /
ಸರ್ವೇಶ್ವರನಿಗೆ ಮೊರೆಯಿಟ್ಟರು ದೊರಕಲಿಲ್ಲ
ಉತ್ತರ //
42 : ಪುಡಿಪುಡಿ ಮಾಡಿದೆ ನಾನವರನು ಗಾಳಿಗೆ
ತೂರುವ ಧೂಲಿನಂತೆ /
ಎತ್ತೆಸೆದು ಬಿಟ್ಟೆ ನಾನವರನು ಮೋರಿಯ
ಕೆಸರಿನಂತೆ //
43 : ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ /
ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ /
ನಾನರಿಯದ ಜನರನೂ ನನಗಧೀನ
ರನ್ನಾಗಿಸಿದೆ //
44 : ದೇಶಾಂತರದವರೂ ಮುದುರಿಕೊಂಡರು ನನ್ನ
ಮುಂದೆ /
ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ
ಮಾತ್ರಕೆ //
45 : ಎದೆಗುಂದಿದವರಾದರು ಆ ವಿದೇಶಿಯರು /
ತಮ್ಮ ಕೋಟೆಯಿಂದ ನಡುಗುತ್ತಾ
ಹೊರಬಂದರು //
46 : ಸರ್ವೇಶ್ವರನು ಚೈತನ್ಯ ಸ್ವರೂಪನು /
ನನ್ನುದ್ಧಾರಕನಾದವಗೆ ಸ್ತುತಿಸ್ತೋತ್ರವು /
ನನ್ನ ರಕ್ಷಿಸುವ ದೇವರಿಗೆ ಜಯಕಾರವು //
47 : ನನ್ನ ಶತ್ರುಗಳಿಗೆ ವಿಧಿಸುವನಾದೇವ
ಪ್ರತಿದಂಡನೆ /
ಜನಾಂಗಗಳನು ಅಧೀನಪಡಿಸುವನಾತ
ನನಗೆ //
48 : ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ /
ಎದುರಾಳಿಗೆ ತಪ್ಪಿಸಿ ನನ್ನನ್ನುನ್ನತಿಗೇರಿಸಿದೆ /
ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ //
49 : ಎಂತಲೆ, ಅನ್ಯ ಜನಗಳ ಮಧ್ಯೆ
ನಿನ್ನ ಸ್ತುತಿಪೆನು /
ನಿನ್ನ ನಾಮವನು ಸರ್ವೇಶ್ವರಾ,
ಸಂಕೀರ್ತಿಪೆನು //
50 : ತಾನೇ ನೇಮಿಸಿದ ಅರಸನಿಗೆ /
ಆತನೀವನು ವಿಶೇಷ ರಕ್ಷಣೆ //
51 : ಅನುಗ್ರಹಿಸುವನಾತ ಅನಂತಾನಂತ ಕೃಪೆ /
ತಾನಭಿಷೇಕಿಸಿದ ದಾವೀದನಿಗೆ,
ಆತನ ಸಂತತಿಗೆ //