1 : ಲಕ್ಷ್ಯವಿಡು, ಓ ಪ್ರಭು, ಎನ್ನ
ನ್ಯಾಯವಾದ ಮೊರೆಗೆ /
ಕಿವಿಗೊಡು, ನಿಷ್ಕಪಟ ಬಾಯಿಂದ
ಬಂದ ಪ್ರಾರ್ಥನೆಗೆ //
2 : ನ್ಯಾಯ ತೀರ್ಪು ಬರಲಿ ಎನಗೆ, ನಿನ್ನಿಂದಲೆ |
ನೀತಿಗನುಸಾರ ನೋಡುವಾತ, ನೀನಲ್ಲವೆ?||
3 : ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು / ನಾ ದೋಷರಹಿತ, ಮಾತಲಿ ತಪ್ಪದವ, ಎಂದಾಗ ತೀರ್ಮಾನಿಸು //
4 : ಲೋಕವಿಚಾರಗಳಲಿ ಹಿಂಸಾತ್ಮಕ ಮಾರ್ಗ
ಹಿಡಿದಿಲ್ಲ /
ನಿನ್ನಧರ ವಚನವನು ನಾನೆಂದಿಗು ವಿೂರಿ
ನಡೆದಿಲ್ಲ //
5 : ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ /
ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ //
6 : ಸದುತ್ತರ ಪಾಲಿಪೆಯೆಂದು ನಂಬಿ
ಬೇಡುವೆನಯ್ಯಾ /
ಮೊರೆಯಿಡುವೆ ದೇವಾ, ಕಿವಿಗೊಟ್ಟು
ಆಲಿಸಯ್ಯಾ //
7 : ಶರಣರನು ಶತ್ರುವಿನಿಂದ ಸಂರಕ್ಷಿಸುವಾತ
ನೀನಯ್ಯಾ /
ಭುಜಬಲವನು ಪ್ರಯೋಗಿಸಿ ಕಾಪಾಡುವಾತ
ನೀನಯ್ಯಾ /
ನಿನ್ನಚಲ ಪ್ರೀತಿಯನ್ನಚ್ಚರಿಯಿಂದ
ತೋರ್ಪಡಿಸಯ್ಯಾ //
8 : ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ /
ಸುತ್ತುವರೆದಿರುವ ಪ್ರಾಣ ವೈರಿಗಳಿಂದ /
9 : ನಿನ್ನ ಕನೀನಿಕೆಯಂತೆ ಎನ್ನ ಕಾಪಾಡು /
ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು //
10 : ಕರುಣೆಗೆಡೆಯಿಲ್ಲ ಕೊಬ್ಬಿದಾ ಹೃದಯಗಳಲಿ / ಗರ್ವ ತುಳುಕುತಿದೆ ಆ ಜನರ ಬಾಯಿಗಳಲಿ //
11 : ಹಿಂದೆಯೆ ಬಂದು ಸುತ್ತುವರೆದುಕೊಳ್ಳುವರು /
ನೆಲಕಪ್ಪಳಿಸಲು ಹೊಂಚು ಕಾಯುತ್ತಿರುವರು //
12 : ಇಹರು ಸೀಳಿಹಾಕಲಿರುವ ಕೇಸರಿಯಂತೆ /
ಹೊಂಚು ಹಾಕುತಿಹರು ಪ್ರಾಯ
ಸಿಂಹದಂತೆ //
13 : ಸದೆಬಡಿ ಪ್ರಭು, ಆ ದುರುಳರನು
ಇದಿರ್ಗೊಂಡು /
ಖಡ್ಗ ಹಿಡಿದೆನ್ನ ಪ್ರಾಣವನು ಕಾಪಾಡು //
14 : ಇಳೆಯ ಮಾನವರಿಂದ ಪ್ರಭು, ಎನ್ನನು
ಕೈಯಾರೆ ಕಾಪಾಡು /
ಜಗವೇ ತಮ್ಮ ಪಾಲಿನ ಪರಿಮಿತಿ
ಎನ್ನುವವರಿಂದ ಕಾದಿಡು //
ಅವರಾದರೊ ನಿನ್ನ ನಿಧಿಯಿಂದ ಉದರ
ತುಂಬಿಸಿಕೊಳ್ಳಲಿ /
ಮಕ್ಕಳು, ಮರಿಮಕ್ಕಳಿಗೆ ಯಥೇಚ್ಛವಾಗಿ
ಉಳಿಸಿಕೊಳ್ಳಲಿ //
15 : ಸತ್ಯಸಂಧನಾದ ನಾನೊ ಸೇರುವೆ ನಿನ್ನ
ಸಾನ್ನಿಧ್ಯವನು /
ಎಚ್ಚೆತ್ತು ನಿನ್ನ ಮುಖದರ್ಶನದಿಂದ
ತೃಪ್ತನಾಗುವೆನು //