1 : ನಮ್ಮ ದೇವರನು ಹೊಗಳಿ
ಹಾಡುವುದು ಉಚಿತ /
ಆತನ ಸ್ತುತಿ ಮನೋಹರ, ಅದು
ಬಲುಸೂಕ್ತ
2 : ನಿರ್ಮಿಸುತಿಹನು ಪ್ರಭು ಮರಳಿ
ಜೆರುಸಲೇಮನು /
ಒಂದು ಸೇರಿಸುತಿಹನು ಚದರಿದ
ಇಸ್ರಯೇಲರನು
3 : ವಾಸಿಮಾಡುವನು ಮುರಿದ ಮನಸ್ಸುಳ್ಳವರನು /
ಕಟ್ಟಿ ಗುಣಪಡಿಸುವನು ಅವರ ಗಾಯಗಳನು
4 : ನಿಯಮಿಸಿಹನು ತಾರೆಗಳ ಸಂಖ್ಯೆಯನು /
ಇಟ್ಟಿಹನು ಪ್ರತಿಯೊಂದಕೂ ಹೆಸರನು
5 : ನಮ್ಮ ಪ್ರಭು ಘನವಂತ, ಪರಾಕ್ರಮಿ /
ಅಪರಿಮಿತವಾದುದು ಆತನ ಜ್ಞಾನನಿಧಿ
6 : ಆಧಾರವಾಗಿಹನು ಪ್ರಭು ದೀನರಿಗೆ /
ತುಳಿದುಬಿಡುವನು ದುರ್ಜನರನು ನೆಲಕೆ
7 : ಧನ್ಯವಾದವಿತ್ತು ಹಾಡಿರಿ ಪ್ರಭುವನು /
ಕಿನ್ನರಿಯೊಡನೆ ಭಜಿಸಿರಿ ನಮ್ಮ ದೇವನನು
8 : ಕವಿಸುವನಾತ ಮೋಡಗಳನು ಗಗನದಲಿ /
ಸುರಿಸುವನು ಮಳೆಯನು ಬುವಿಯಲಿ /
ಬೆಳೆಸುವನು ಹುಲ್ಲನು ಬೆಟ್ಟಗಳಲಿ
9 : ಪಶುಗಳಿಗೂ ಕೂಗುವ ಕಾಗೆಮರಿಗಳಿಗೂ /
ಒದಗಿಸುವನು ಬೇಕಾದ ಆಹಾರಗಳನು
10 : ಅಶ್ವಬಲದಲಿ ಆತನಿಗೆ ಇಷ್ಟವಿಲ್ಲ /
ಶೂರನ ಶಕ್ತಿಯನವನು ಮೆಚ್ಚುವುದಿಲ್ಲ
11 : ಮೆಚ್ಚುವನಾತ ತನ್ನಲಿ
ಭಯಭಕ್ತಿಯುಳ್ಳವರನು /
ತನ್ನಚಲ ಪ್ರೀತಿಯಲಿ ಭರವಸೆಯುಳ್ಳವರನು
12 : ಜೆರುಸಲೇಮೇ, ಕೀರ್ತಿಸು ಪ್ರಭುವನು /
ಸಿಯೋನೇ, ಸ್ತುತಿಸು ನಿನ್ನ ದೇವರನು
13 : ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ
ಅಗುಳಿಗಳನು
ಆಶೀರ್ವದಿಸಿಹನು ನಿನ್ನಲ್ಲಿರುವ
ಮಕ್ಕಳನು
14 : ನಿನ್ನ ಪ್ರಾಂತದೊಳಗೆಲ್ಲಾ ಇರುವುದು
ನೆಮ್ಮದಿ /
ನೀಡುವನು ನಿನಗೆ ಅತ್ಯುತ್ತಮ ಗೋದಿ
15 : ಕಳಿಸುವನು ಧರೆಗೆ ತನ್ನ ಆಣತಿ /
ಸಿದ್ಧಿಯಾಗುವುದದು ಬಲು ಶೀಘ್ರದಿ
16 : ಸುರಿಸುವನು ಹಿಮವನು ಉಣ್ಣೆಯಂತೆ /
ಹರಡುವನು ಇಬ್ಬನಿಯನು ಬೂದಿಯಂತೆ
17 : ಸುರಿಸುವನು ಆಲಿಕಲ್ಲನು ರೊಟ್ಟಿ
ತುಂಡುಗಳಂತೆ /
ಕೊರೆಯುವ ಚಳಿಯನು ಕಳಿಸುವನು
ಸಹಿಸಲಾಗದಂತೆ
18 : ಕರಗುವುವು ಆ ಕಲ್ಲುಗಳು ಆತನ ಅಪ್ಪಣೆಗೆ /
ಹರಿಯುವುದು ನೀರು ಆತ ಕಳುಹಿಸುವ
ಗಾಳಿಗೆ
19 : ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ /
ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ
20 : ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ /
ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ /
ಅಲ್ಲೆಲೂಯ!