1 : ದೇವಾ, ನನ್ನೊಡೆಯಾ,
ಮಾಡುವೆ ನಿನ್ನ ಗುಣಗಾನ /
ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ
ನಮನ
2 : ಹೊಗಳುವೆನು ನಾ ದಿನದಿನವೂ ನಿನ್ನನು /
ಭಜಿಸುವೆನೆಂದೆಂದಿಗೂ ನಿನ್ನ ಹೆಸರನು
3 : ಪ್ರಭು ಮಹಾತ್ಮನು, ಸ್ತುತ್ಯರ್ಹನು /
ಆತನ ಮಹಿಮೆ ಅಗಮ್ಯವಾದದು
4 : ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ
ಕಾರ್ಯಗಳನು /
ತಿಳಿಸುವುದು ಪ್ರಭು, ನೀ ಮಾಡಿದೆಲ್ಲಾ
ಮಹತ್ಕಾರ್ಯಗಳನು
5 : ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು /
ನಿನ್ನ ಮಹೋನ್ನತ ಮಹಿಮಾಪ್ರಭಾವವನು
6 : ಜನರು ಸಾರುವರು ನಿನ್ನ ಅದ್ಭುತ ಶಕ್ತಿಯನು /
ನಾ ಪ್ರಸಿದ್ಧಪಡಿಸುವೆನು ನಿನ್ನ
ಮಹಿಮೆಯನು
7 : ಪ್ರಕಟಿಸುವರವರು ನಿನ್ನ ಮಹೋಪಕಾರವನು /
ಹಾಡಿ ಹೊಗಳುವರು ನಿನ್ನ
ನ್ಯಾಯನೀತಿಯನು
8 : ಪ್ರಭು ದಯಾನಿಧಿ, ಕೃಪಾಸಾಗರನು /
ಸಹನಶೀಲನು, ಪ್ರೀತಿಪೂರ್ಣನು
9 : ಪ್ರಭುವಿನ ಕರುಣೆ ಎಲ್ಲರ ಮೇಲೆ /
ಆತನ ಕೃಪೆಯು ಸೃಷ್ಟಿಯ ಮೇಲೆ
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು /
ಕೊಂಡಾಡುವುದು ನಿನ್ನನು ಭಕ್ತ ಸಮೂಹವು
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ
ಮಹತ್ವವನು /
ವರ್ಣಿಸುವರವರು ನಿನ್ನ ಶಕ್ತಿ
ಸಾಮಥ್ರ್ಯವನು
12 : ಅರಿವರಿಂತು ಜನರು ನಿನ್ನ ಶೂರ
ಕಾರ್ಯಗಳನು /
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ
ಪ್ರಭಾವವನು
13 : ಶಾಶ್ವತವಾದುದು ನಿನ್ನ ರಾಜ್ಯವು /
ಇರುವುದೆಂದಿಗು ನಿನ್ನ ಆಳ್ವಿಕೆಯು
14 : ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು /
ನಡೆಯಲಿ ಆತನು ಸದಾ ಪ್ರೀತಿಮಯನು
15 : ಎತ್ತುವನಾತ ಬಿದ್ದವರನೆಲ್ಲ /
ಉದ್ಧರಿಪನು ಕುಗ್ಗಿದವರನೆಲ್ಲ
16 : ಎಲ್ಲ ಜೀವಿಗಳ ಕಣ್ಣು ಪ್ರಭು,
ನಾಟಿವೆ ನಿನ್ನ ಕಡೆಗೆ /
ಕಾಲಕಾಲಕೆ ಕೊಡುವೆ ಆಹಾರವನು
ಅವುಗಳಿಗೆ
17 : ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು /
ಎಲ್ಲರ ಕೋರಿಕೆಗಳನು ಈಡೇರಿಸುವವನು
18 : ಪ್ರಭುವಿನ ಮಾರ್ಗ ಧರ್ಮಸಮ್ಮತ /
ಆತನ ಕಾರ್ಯವೆಲ್ಲ ಪುನೀತ
19 : ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ /
ಯಥಾರ್ಥವಾಗಿ ಆತನನು ಅರಸುವವರಿಗೆ
20 : ಹೆದರಿ ನಡೆಯುವವರ ಇಷ್ಟವನು
ಈಡೇರಿಸುವನು /
ಅವರ ಮೊರೆಯನು ಕೇಳಿ ಅವರನು
ರಕ್ಷಿಸುವನು
21 : ಸಲಹುವನು ತನ್ನನು ಪ್ರೀತಿಸುವವರೆಲ್ಲರನು /
ನಾಶಮಾಡುವನು ದುರ್ಮಾರ್ಗಿಗಳೆಲ್ಲರನು
22 : ಉಸುರುತಿದೆ ನನ್ನ ನಾಲಿಗೆ ಪ್ರಭುವಿನ
ಸ್ತೋತ್ರವನು /
ನರರೆಲ್ಲರು ಸ್ತುತಿಸಲಿ ಸತತ ಆತನ
ಶ್ರೀನಾಮವನು