1 : ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ
ಆಶ್ರಯದುರ್ಗಕ್ಕೆ /
ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ
2 : ಆತನೇ ನನಗೆ ಬಂಡೆ, ಕೋಟೆ, ದುರ್ಗ,
ಉದ್ಧಾರಕ /
ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ
3 : ಹೇ ಪ್ರಭೂ, ಮನುಜನು ಎಷ್ಟರವನು,
ನೀನವನನು ಲಕ್ಷಿಸಲು /
ನರಮಾನವನು ಏತರವನು, ನೀನವನನು
ಪರಾಮರಿಸಲು
4 : ಮಾನವನು ಕೇವಲ ಉಸಿರಿಗೆ ಸಮಾನ /
ಮರೆಯಾಗುವ ನೆರಳು ಅವನ ಜೀವನ
5 : ಆಕಾಶವನು ತಗ್ಗಿಸಿ ಬಾ ಪ್ರಭು ಇಳಿದು /
ಬೆಟ್ಟಗಳನು ನೀ ಮುಟ್ಟಲು, ಹೊಗೆ
ಹೊರಹೊಮ್ಮುವುದು
6 : ಸಿಡಿಲಿನಿಂದ ಚೆದರಿಸಿಬಿಡು ಶತ್ರುಗಳನು /
ನಿನ್ನಂಬುಗಳಿಂದ ಭ್ರಾಂತಗೊಳಿಸವರನು
7 : ನನ್ನ ಸೆಳೆದುಕೊ ಮಹಾಜಲರಾಶಿಯಿಂದ /
ನಿನ್ನ ಕೈಚಾಚಿ ಮೇಲಣಲೋಕದಿಂದ /
ನನ್ನನು ಬಿಡಿಸು ಅನ್ಯಜನರ ಕೈಯಿಂದ
8 : ಅವರ ಬಾಯಿಂದ ಬರುವ ಮಾತು ಅಸತ್ಯ /
ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ
9 : ಹಾಡುವೆ ದೇವಾ, ನಿನಗೆ ನೂತನ
ಕೀರ್ತನೆಯನು /
ಪಾಡುವೆ ನುಡಿಸುತ್ತಾ ದಶತಂತಿಯ
ವೀಣೆಯನು
10 : ನೀನೇ ಅರಸುಗಳಿಗೆ ಜಯಪ್ರದನು /
ದಾಸ ದಾವೀದನನು ಬಿಡಿಸಿದವನು
11 : ಕ್ರೂರ ವೈರಿಗಳಿಂದೆನ್ನ ಬಿಡಿಸಯ್ಯಾ /
ಅವರ ಬಾಯಿಂದ ಬರುವ ಮಾತು ಅಸತ್ಯ /
ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ
12 : ನಮ್ಮ ಗಂಡು ಮಕ್ಕಳಿರಲಿ /
ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ
ಗಿಡಗಳಂತೆ //
ನಮ್ಮ ಹೆಣ್ಣುಮಕ್ಕಳಿರಲಿ /
ಅರಮನೆಯಲ್ಲಿ ಕೆತ್ತಿದ ಸುಂದರ
ಮೂಲೆಗಂಬಗಳಂತೆ
13 : ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ
ಕಣಜಗಳು /
ಈಯಲಿ ಸಾವಿರಾರು ಮರಿಗಳನು ನಮ್ಮ
ಹೊಲದ ಕುರಿಗಳು
14 : ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ /
ಮೈಯಿಳಿಯದೆ, ಲೋಪವಿಲ್ಲದೆಯೆ
ಗರ್ಭಧರಿಸಲಿ /
ನಮ್ಮ ಬೀದಿಗಳಲಿ ಗೋಳಾಟ
ಕೇಳಿಬರದಿರಲಿ
15 : ಇಂತಹ ಸಮೃದ್ಧಿ ಪಡೆದಿರುವ ಜನರು
ಭಾಗ್ಯವಂತರು /
ಯಾರಿಗೆ ದೇವರು ಪ್ರಭುವಾಗಿಹನೋ ಅವರು
ಧನ್ಯರು