1 : ಆಲಿಸು ಪ್ರಭು ನನ್ನ ಪ್ರಾರ್ಥನೆ
ಸೇರಲಿ ನಿನಗೀ ಬಿನ್ನಹ /
ನಿನ್ನ ನೀತಿಸತ್ಯತೆಗಳನುಸಾರ ಪಾಲಿಸೆನಗೆ
ಸದುತ್ತರ
2 : ಗುರಿಮಾಡಬೇಡ ನಿನ್ನ ದಾಸನನು ನ್ಯಾಯ
ವಿಚಾರಣೆಗೆ /
ಯಾವ ಜೀವಾತ್ಮನೂ ನಿರ್ದೋಷಿಯಲ್ಲ ನಿನ್ನ
ಲೆಕ್ಕಕೆ
3 : ಮಾಡಿಹನು ನನ್ನ ಪ್ರಾಣ ನೆಲಕಚ್ಚುವಂತೆ
ಬೆನ್ನಟ್ಟಿಹಾ ವೈರಿ /
ದೂಡಿಹನು ಎಂದೊ ಸತ್ತ ಶವದಂತೆ
ಕಾರ್ಗತ್ತಲೆಗಾ ದ್ರೋಹಿ
4 : ಸೊರಗಿಹೋಗಿದೆ ನನ್ನ ಚೈತನ್ಯ /
ನಿಬ್ಬೆರಗಾಗಿದೆ ನನ್ನ ಹೃದಯ
5 : ನೆನಸಿಕೊಳ್ಳುತಿಹೆನು ಹಳೆಯ ಕಾಲವನು /
ಧ್ಯಾನಿಸುತಿಹೆನು ನಿನ್ನ ಕಾರ್ಯಗಳನು /
ಸ್ಮರಿಸುತಿಹೆನು ನಿನ್ನ ಕೈಕೆಲಸಗಳನು
6 : ಬೇಡುತಾ ನಿನ್ನ ಕಡೆಗೆ ಕೈಚಾಚಿದೆ /
ನಿನಗಾಗಿ ನನ್ನಾತ್ಮ ತವಕಪಡುತ್ತಿದೆ
7 : ಸದುತ್ತರ ಪಾಲಿಸು ಪ್ರಭೂ, ಸೊರಗಿದೆ ಎನ್ನ
ಚೇತನ /
ನೀ ವಿಮುಖನಾದರೆ ನಾ ನರಕಹೊಕ್ಕವರಿಗೆ
ಸಮಾನ
8 : ಬೆಳಿಗ್ಗೆ ಸ್ಮರಿಸಮಾಡು ನಿನ್ನಚಲ ಪ್ರೀತಿಯನು /
ನಿನ್ನಲ್ಲಿಯೆ ಇಟ್ಟಿರುವೆನು ನನ್ನ ನಂಬಿಕೆಯನು /
ತೋರಿಸು ನನಗೆ ನಾ ಹಿಡಿಯಬೇಕಾದ
ಮಾರ್ಗವನು /
ನಿನ್ನ ಕಡೆಗೆ ಎತ್ತಿರುವೆನು ನನ್ನ ಹೃನ್ಮನಗಳನು
9 : ಶತ್ರುಗಳಿಂದ ಪ್ರಭು ಮುಕ್ತಗೊಳಿಸೆನ್ನನು /
ನಿನ್ನನೇ ಮೊರೆಹೊಕ್ಕು ನಾ ಬಂದಿರುವೆನು
10 : ನೀನೆನ್ನ ದೇವರು; ಕಲಿಸೆನಗೆ ನಡೆಯಲು ನಿನ್ನ
ಚಿತ್ತದಂತೆ /
ನಿನ್ನ ಶುಭಾತ್ಮ ನೆರವಾಗಲಿ ನಾ
ಸಮಹಾದಿಯಲಿ ನಡೆವಂತೆ
11 : ಜೀವಿಸಮಾಡೆನ್ನನು ಪ್ರಭು, ನಿನ್ನ ನಾಮದ
ನಿಮಿತ್ತ /
ನಿನ್ನ ನೀತಿಗನುಸಾರ ಬಿಡಿಸೆನ್ನ ಪ್ರಾಣವನು
ಆಪತ್ತಿನಿಂದ
12 : ನಿನ್ನಚಲ ಪ್ರೀತಿಯಿಂದ ಧ್ವಂಸಮಾಡು
ಶತ್ರುಗಳನು /
ನಶಿಸಿಹಾಕು ಪ್ರಾಣವೈರಿಗಳನು, ನಾ ನಿನ್ನ
ದಾಸನು