1 : ಬೇಗನೆ ಬಾ ಪ್ರಭು,
ಮೊರೆಯಿಡುವೆ ನಿನಗೆ /
ಮೊರೆಯಿಡುವಾಗಲೆಲ್ಲ ಕಿವಿಗೊಡು ನನಗೆ
2 : ಸಮರ್ಪಕವಾಗಲಿ ನನ್ನ ಪ್ರಾರ್ಥನೆ
ಧೂಪಾರತಿಯಂತೆ /
ಕೈಮುಗಿದು ಮಾಡುವ ವಂದನೆ
ಸಂಧ್ಯಾಬಲಿಯರ್ಪಣೆಯಂತೆ
3 : ಕಾವಲಿರಿಸು ಪ್ರಭು ನನ್ನ ಬಾಯಿಗೆ /
ಪಹರೆಯಿರಲಿ ನನ್ನ ತುಟಿ ಕದಗಳಿಗೆ
4 : ಮಾಡು ನನ್ನ ಹೃದಯ ದುರಾಚಾರವನು
ಮೆಚ್ಚದಂತೆ /
ಕಾಪಾಡು ದುರ್ಜನರೊಡಗೂಡಿ ಕೇಡನು
ಮಾಡದಂತೆ /
ನೋಡು ದುರುಳರೌತಣಗಳಲಿ ನಾ
ಪಾಲ್ಗೊಳ್ಳದಂತೆ
5 : ಸಜ್ಜನರು ವಿಧಿಸುವಾ ಶಿಕ್ಷೆ ಎನಗೆ ಕಟಾಕ್ಷ /
ದುರ್ಜನರಿಂದ ನನಗಾಗದಿರಲಿ ಅಭಿಷೇಕ /
ಸತತ ಪ್ರಾರ್ಥಿಸುವೆ ಆ ದುಷ್ಕøತ್ಯಗಳ ವಿರುದ್ಧ
6 : ದುರುಳರ ಒಡೆಯರು ಶಿಖರದಿಂದ ಬಿದ್ದಾಗ
ಕೆಳಕೆ /
ನನ್ನ ಮಾತು ಯಥಾರ್ಥವೆಂದು ಜನ
ಕಿವಿಗೊಡುವರೆನಗೆ
7 : ಉತ್ತ ಹೊಲದ ಹೆಂಟೆಗಳನು ಒಡೆದು
ಚದರಿಸುವ ಹಾಗೆ /
ಎರಚಲಾಗುವುದು ಅವರ ಎಲುಬುಗಳನು
ಸನರಕದ ಬಾಯಿಗೆ
8 : ಹೇ ಪ್ರಭೂ, ದೇವಾ, ನನ್ನ ದೃಷ್ಟಿ ನಿನ್ನ
ಮೇಲಿದೆ /
ವಿನಾಶಕೊಪ್ಪಿಸಬೇಡೆನ್ನ, ನಿನ್ನಾಶ್ರಯ
ಕೋರಿರುವೆ
9 : ಕಾಪಾಡು ಕೆಡುಕರೊಡ್ಡಿದ ಉರುಲಿನಿಂದ /
ತಪ್ಪಿಸೆನ್ನನು ಅವರಿಟ್ಟ ಬೋನಿನಿಂದ
10 : ದುರುಳರೊಡ್ಡಿದ ಉರುಲಲಿ ಆ ದುರುಳರೆ
ಸಿಕ್ಕಿಬೀಳಲಿ /
ನಾನಾದರೊ ನುಗ್ಗಿನಡೆವೆನು ಸುರಕ್ಷಿತವಾಗಿಯೆ
ಅಲ್ಲಿ //