1 : ಬಿಡಿಸೆನ್ನನು ಪ್ರಭು
ಕೆಡುಕರಿಂದ /
ಕಾಪಾಡೆನ್ನನು ಹಿಂಸಕರಿಂದ
2 : ಕೇಡನು ಕಲ್ಪಿಸುತ್ತಾರವರು ಮನದೊಳು /
ಕಲಹವೆಬ್ಬಿಸುತ್ತಾರೆ ಯಾವಾಗಲೂ
3 : ಅವರ ನಾಲಗೆಯು ಸರ್ಪದಂತೆ /
ಹಾವಿನ ವಿಷ ಅವರ ತುಟಿ ಹಿಂದೆ
4 : ಪ್ರಭು, ತಪ್ಪಿಸೆನ್ನನು ದುಷ್ಟರ ಕೈಯಿಂದ /
ಕಾಪಾಡಿ ರಕ್ಷಿಸೆನ್ನನು ಹಿಂಸಕರಿಂದ /
ನಾನೆಡವುದನೇ ನಿರೀಕ್ಷಿಸುವವರಿಂದ
5 : ಒಡ್ಡಿದರು ಗರ್ವಿಗಳು ಗುಪ್ತವಾಗಿ /
ಉರುಲನು, ಪಾಶಗಳನು ನನಗಾಗಿ /
ಬಲೆಹಾಸಿದರು ದಾರಿಗೆ ಅಡ್ಡವಾಗಿ
6 : “ನೀನೆ ನನ್ನ ದೇವರು” ಎಂದೆ ಪ್ರಭುವಿಗೆ /
ಕಿವಿಗೊಡೆಂದು ಕೇಳಿದೆ, ನನ್ನ ವಿಜ್ಞಾಪನೆಗೆ
7 : ಸ್ವಾಮಿದೇವಾ, ನೀನೆನಗೆ ದುರ್ಗಸ್ಥಾನ /
ರಣರಂಗದಲಿ ನೀನೆನಗೆ ಶಿರಸ್ತ್ರಾಣ
8 : ನೆರವೇರಿಸಬೇಡ ದುರುಳರ ಕೋರಿಕೆಯನು /
ಕೈಗೂಡಿಸಬೇಡ ಪ್ರಭು, ಅವರ
ಕುಯುಕ್ತಿಯನು
9 : ನನ್ನನ್ನು ಸುತ್ತುವರೆದಿರುವವರು
ತಲೆಯೆತ್ತದಿರಲಿ /
ಅವರಾಡುವ ಕೇಡು ಅವರ ತಲೆಯಮೇಲೇ
ಎರಗಲಿ
10 : ಸುರಿಯಲಿ ಆ ಜನರ ಮೇಲೆ ಉರಿಉರಿವ
ಬೆಂಕಿಕೆಂಡ /
ಅವರೇಳದಂತೆ ಸೇರಲಿ ಪಾತಾಳದ ಅಗ್ನಿಕುಂಡ
11 : ಉಳಿಯದಿರಲಿ ನಾಡೊಳು ಚಾಡಿಕೋರರು |
ಕೇಡಿಂದ ನಾಶವಾಗಲಿ ಹಿಂಸಕರು ||
12 : ಪ್ರಭು ನೀ ದೀನದಲಿತರ ವಕೀಲನೆಂದು ನಾ
ಬಲ್ಲೆ /
ಬಡವರಿಗೆ ನ್ಯಾಯ ದೊರಕಿಸುವವ ನೀ
ಅಲ್ಲವೆ?
13 : ಭಜಿಸುವರು ಸಜ್ಜನರು ನಿನ್ನಾಸಿರಿನಾಮವನು /
ಬಾಳ್ವರು ಸುಮನಸ್ಕರು ಬಿಡದೆ ನಿನ್ನ
ಸನ್ನಿಧಿಯನು //