1 : ಪ್ರಭು, ಪರಿಶೋಧಿಸಿರುವೆ
ನೀ ನನ್ನನು /
ಅರಿತುಕೊಂಡಿರುವೆ ಅಂತರಂಗವನು
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ /
ನನ್ನಾಲೋಚನೆ ದೂರದಿಂದಲೇ ನಿನಗೆ
ತಿಳಿದಿದೆ
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ /
ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ
4 : ಪ್ರಭು, ನಾ ಮಾತೆತ್ತುವುದಕ್ಕೆ ಮುಂಚಿತವಾಗಿ /
ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ
5 : ನನ್ನ ಹಿಂದೆಯೂ ಮುಂದೆಯೂ ನೀನಿರುವೆ /
ಅಭಯ ಹಸ್ತವನು ನನ್ನ ಮೇಲಿರಿಸಿರುವೆ
6 : ನನ್ನ ಕುರಿತು ನಿನಗಿರುವ ಅರಿವು ಅಗಾಧ /
ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ
7 : ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ
ತಪ್ಪಿಸಿಕೊಳ್ಳಲು? /
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ
ಮರೆಯಾಗಲು?
8 : ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ /
ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ
ಅಲ್ಲಿ
9 : ನಾನರುಣನ ರೆಕ್ಕೆಗಳನೇರಿ ಹಾರಿದರೂ /
ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ
10 : ಅಲ್ಲೂ ನನ್ನ ನಡೆಸುವುದು ನಿನ್ನ ಕೈ /
ನನ್ನ ಹಿಡಿದಿರುವುದು ನಿನ್ನ ಬಲಗೈ
11 : “ಕಾರ್ಗತ್ತಲೆನ್ನ ಕವಿಯಲಿ” ಎಂದರೂ /
“ಸುತ್ತಲ ಬೆಳಕು ಇರುಳಾಗಲಿ” ಎಂದರೂ
12 : ಕತ್ತಲು ಕತ್ತಲಲ್ಲ ನಿನಗೆ /
ಇರುಳೂ ಹಗಲಾಗಿದೆ ನಿನಗೆ /
ಕತ್ತಲು, ಬೆಳಕು - ಒಂದೇ ನಿನಗೆ
13 : ನನ್ನ ಅಂತರಂಗವನು ಉಂಟುಮಾಡಿದಾತ
ನೀನು /
ತಾಯಗರ್ಭದಲೆ ನನ್ನ ರೂಪಿಸಿದಾತ ನೀನು
14 : ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ /
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ /
ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು
ಸಮರ್ಥ
15 : ನನ್ನ ಅಸ್ಥಿಪಂಜರವನು ರೂಪಿಸುವಾಗ /
ತಾಯಗರ್ಭದೊಳು ಅಚ್ಚರದಿ ರಚಿಸುವಾಗ /
ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ /
ಮರೆಯಾಗಿರಲಿಲ್ಲ ನಾನು ನಿನಗಾಗ
16 : ನಾನಿನ್ನೂ ಭ್ರೂಣವಾಗಿದ್ದಾಗ ನೋಡಿದವು
ನಿನ್ನ ಕಣ್ಣುಗಳು /
ಪ್ರಾರಂಭವಾಗುವುದಕ್ಕೆ ಮುನ್ನ ನನ್ನ
ಆಯುಷ್ಕಾಲದ ದಿನಗಳು /
ಲಿಖಿತವಾದವು ಅವುಗಳಲೊಂದೂ ತಪ್ಪದೆ
ನಿನ್ನ ಪುಸ್ತಕದೊಳು
17 : ದೇವಾ, ನಿನ್ನ ಯೋಚನೆಗಳೆಷ್ಟು ಅಮೂಲ್ಯ /
ಅವುಗಳೆಷ್ಟು ಅಸಂಖ್ಯ, ನನಗದೆಷ್ಟು ಅಗಣ್ಯ
18 : ಎಣಿಕೆಗೆ ಅವುಗಳ ಸಂಖ್ಯೆ ಸಮುದ್ರತೀರದ
ಮರಳಿನಂತೆ /
ಎಚ್ಚತ್ತು ಎಣಿಸಲೆತ್ನಿಸೆ ನಿನ್ನ ಮುಂದಿರುವೆ
ಮುಂಚಿನಂತೆ
19 : ದೇವಾ, ದುಷ್ಟರನು ಸಂಹರಿಸಿಬಿಟ್ಟರೆ ಎಷ್ಟೋ
ಉಚಿತ /
ಕೊಲೆಪಾತಕರು ನನ್ನಿಂದ ತೊಲಗಿಹೋದರೆ
ಎಷ್ಟೋ ಹಿತ
20 : ಅವರಾಡುವ ಮಾತುಗಳು ನಿನಗೆ ವಿರೋಧ /
ಹಗೆಗಳನು ಎತ್ತಿಕ್ಕುವರು ನಿನಗೆ ವಿರುದ್ಧ
21 : ಪ್ರಭು, ನಿನ್ನ ದ್ವೇಷಿಗಳನು ನಾ
ದ್ವೇಷಿಸದಿರುವೆನೆ?/
ನಿನ್ನ ವಿರೋಧಿಗಳನ್ನು ನಾ ತಿರಸ್ಕಾರ
ಮಾಡದಿರುವೆನೆ?
22 : ಹಗೆಮಾಡುವೆನವರನು ಸಂಪೂರ್ಣವಾಗಿ /
ಭಾವಿಸುವೆನವರನು ನನ್ನ ವೈರಿಗಳನ್ನಾಗಿ
23 : ತಿಳಿದುಕೋ ದೇವಾ, ನನ್ನ ಹೃದಯವನು
ಪರೀಕ್ಷಿಸಿ /
ಅರಿತುಕೋ ನನ್ನ ಆಲೋಚನೆಗಳನು
ಪರಿಶೋಧಿಸಿ
24 : ಕೇಡಿದೆಯೇ ನೋಡು ನನ್ನ ಮಾರ್ಗದಲಿ
ನಡೆಸೆನ್ನನು ಆ ಸನಾತನ ಪಥದಲಿ //