1 : ಅಲ್ಲೆಲೂಯ /
ಭಜಿಸಿರಿ, ಪ್ರಭುವಿನ
ಶ್ರೀನಾಮವನು /
ಭಜಿಸಿರಿ ಪ್ರಭುವಿನ ದಾಸರೆ, ಆತನನು
2 : ಕೀರ್ತಿಸಿರಿ ಪ್ರಭುವನು ಆತನ
ಮಂದಿರದಲ್ಲಿರುವವರೇ /
ನಮ್ಮ ದೇವಾಲಯದ ಪ್ರಾಕಾರದಲ್ಲಿಹ
ಸೇವಕರೇ
3 : ಪ್ರಭು ಒಳ್ಳೆಯವನು, ಆತನಿಗೆ ಸ್ತುತಿಸ್ತೋತ್ರ /
ಆತನ ನಾಮವನು ಸ್ತುತಿಸಿರಿ, ಅದು
ಮನೋಹರ
4 : ಆಯ್ದುಕೊಂಡನಾತ ಯಕೋಬ್ಯ ವಂಶವನು /
ಸ್ವಕೀಯ ಜನರನ್ನಾಗಿ ಇಸ್ರಯೇಲರನು
5 : ಗೊತ್ತೆನಗೆ ನಮ್ಮ ಪ್ರಭು ಘನವಂತನೆಂದು /
ಸಕಲ ದೇವರುಗಳಿಗಿಂತಲು ಉನ್ನತನೆಂದು
6 : ಮಾಡುವನು ಪ್ರಭು ತನಗಿಷ್ಟ ಬಂದುದನು /
ಭೂಮ್ಯಾಕಾಶ, ಸಮುದ್ರ ಸಾಗರದೊಳು
7 : ಏಳಮಾಡುವನು ದಿಗಂತದೊಳು ಮೋಡವನು /
ಹೊಳೆಯಮಾಡುವನು ಮಳೆಗೋಸ್ಕರ
ಮಿಂಚನು /
ಬೀಸಮಾಡುವನು ಉಗ್ರಾಣದಿಂದ
ಗಾಳಿಯನು
8 : ಕೊಂದನು ಚೊಚ್ಚಲುಗಳನು ಈಜಿಪ್ಟಿನೊಳು /
ಮನುಷ್ಯರೊಳು, ಪಶುಪ್ರಾಣಿಗಳೊಳು
9 : ಓ ಈಜಿಪ್ಟೆ, ನಿನ್ನೊಳು ಮಾಡಿದನು ಅದ್ಭುತ
ಪವಾಡಗಳನು /
ಫರೋಹನ ಮೇಣ್ ಅವನ ಸೇವಕರ ವಿರುದ್ಧ
ಗೈದನವುಗಳನು
10 : ಕೆಡವಿಬಿಟ್ಟನಾತ ದೊಡ್ಡ ರಾಷ್ಟ್ರಗಳನು /
ಕೊಂದುಹಾಕಿದನಾತ ಬಲಿಷ್ಠರಾಜರನು
11 : ನಿರ್ಮೂಲ ಮಾಡಿದನಾತ ಅಮೋರ್ಯರ
ಸೀಹೋನ್ ರಾಜನನು /
ಬಾಷಾನಿನ ಅರಸ ಓಗನನು, ಕಾನಾನಿನ
ರಾಜ್ಯಗಳೆಲ್ಲವನು
12 : ಕೊಟ್ಟನು ಅವರ ನಾಡನು ಇಸ್ರಯೇಲರಿಗೆ /
ಅದು ಸ್ವಂತ ಸೊತ್ತಾಯಿತು ಆತನಾ ಪ್ರಜೆಗೆ
13 : ನಿನ್ನ ನಾಮ ಪ್ರಭು ಶಾಶ್ವತ /
ನಿನ್ನ ಸ್ಮರಣೆಯೂ ಅನವರತ
14 : ದೊರಕಿಸುವನು ಪ್ರಭು ನ್ಯಾಯವನು ತನ್ನ
ಪ್ರಜೆಗೆ /
ತೋರುವನು ಅನುಕಂಪವನು ತನ್ನ
ಭಕ್ತಾದಿಗಳಿಗೆ
15 : ರಾಷ್ಟ್ರಗಳ ವಿಗ್ರಹಗಳು ಬರೀ ಬೆಳ್ಳಿಬಂಗಾರ /
ಅವುಗಳೆಲ್ಲ ಮಾನವನ ಕೈಕೆಲಸಗಳು ಮಾತ್ರ
16 : ಬಾಯಿದ್ದರೂ ಅವು ಮಾತನಾಡುವುದಿಲ್ಲ /
ಕಣ್ಣುಗಳಿದ್ದರೂ ಅವು ನೋಡುವುದಿಲ್ಲ
17 : ಕಿವಿಯಿದ್ದರೂ ಅವು ಕೇಳುವುದಿಲ್ಲ /
ಅವುಗಳ ಬಾಯಲ್ಲಿ ಉಸಿರೇ ಇಲ್ಲ
18 : ಅವುಗಳಂತಾಗುವರು ಅವುಗಳನ್ನು
ಮಾಡುವವರು /
ಅವುಗಳಂತಾಗುವರು ಅವುಗಳನ್ನು
ನಂಬುವವರು
19 : ಇಸ್ರಯೇಲಿನ ಗೋತ್ರವೇ, ಭಜಿಸು ಪ್ರಭುವನು /
ಆರೋನನ ವಂಶವೇ, ಭಜಿಸು ಆ ವಿಭುವನು
20 : ಲೇವಿಯರ ಮನೆತನವೇ, ಭಜಿಸು ಪ್ರಭುವನು /
ಪ್ರಭುವಿನ ಭಕ್ತರೇ, ಭಜಿಸಿ ಆ ವಿಭುವನು
21 : ಜೆರುಸಲೇಮಿನಲ್ಲಿ ವಾಸಿಸುವ ಪ್ರಭು
ಘನಹೊಂದಲಿ /
ಆತನ ಕೀರ್ತಿ ಸಿಯೋನಿನಿಂದ ಹಬ್ಬಿಹರಡಲಿ /
ಅಲ್ಲೆಲೂಯ