1 : ನೆನಸಿಕೋ ಹೇ ಪ್ರಭೂ,
ದಾವೀದನನು /
ಆತ ಸಹಿಸಿದ ಕಷ್ಟದುಃಖಗಳನು
2 : ಸ್ಮರಿಸಿಕೊ ಪ್ರಭೂ, ಆತನು ಮಾಡಿದ
ಶಪಥವನು /
ಯಕೋಬ್ಯ ಘನದೇವನಿಗಾತ ಕೊಟ್ಟ
ಈ ಮಾತನು
3 : “ಪ್ರಭುವಿಗೆ ಆಲಯವೊಂದನು ನಿರ್ಮಿಸುವ
ತನಕ /
ಯಕೋಬ್ಯ ಘನದೇವನಿಗೆ ಗುಡಿ ಕಟ್ಟುವ
ತನಕ
4 : ನಾ ಸೇರೆನು ನನ್ನರಮನೆಯನು /
ನಾ ಏರೆನು ನನ್ನ ಶಯ್ಯೆಯನು
5 : ಮುಚ್ಚೆನು ನಾನು ಕಣ್ಣುಗಳನು /
ಕೂಡಿಸೆನು ನಾನು ರೆಪ್ಪೆಗಳನು”
6 : ಮಂಜೂಷವನು ಕುರಿತು ಕೇಳಿದೆವು
ಎಫ್ರಾತಾದಲಿ /
ನಮಗದು ಕಾಣಬಂದಿತು ಆ ಯಹಾರ್
ಮೈದಾನದಲಿ
7 : ಹೋಗೋಣ ಬನ್ನಿರಿ ಆತನ ಮಂದಿರಕೆ /
ಅಡ್ಡಬೀಳೋಣ ಆತನ ಪಾದಪೀಠಕೆ
8 : ಆಗಮಿಸು ಪ್ರಭು, ನಿನ್ನ ತೇಜೋ
ಮಂಜೂಷದೊಡನೆ /
ನಿನ್ನಾ ವಾಸಸ್ಥಾನವನು ಬಂದು ಸೇರು ಬೇಗನೆ
9 : ನೀತಿಭೂಷಿತರಾಗಲಿ ನಿನ್ನ ಯಾಜಕರು /
ಆನಂದ ಘೋಷಮಾಡಲಿ ನಿನ್ನ ಭಕ್ತಜನರು
10 : ನಿನ್ನ ದಾಸ ದಾವೀದನ ಪ್ರಯುಕ್ತ /
ತಳ್ಳಲ್ಪಡದಿರಲಿ ನಿನ್ನಾ ಅಭಿಷಿಕ್ತ
11 : ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: /
ಆಣೆಯಿಟ್ಟು ಕೊಟ್ಟಾ ಮಾತಿಗೆ
ತಪ್ಪಲಾರನಾತ: /
“ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ
ತನುಜನೊಬ್ಬನನು”
12 : “ನನ್ನ ನೇಮನಿಯಮಗಳನು ನಿನ್ನ ಮಕ್ಕಳು
ಅನುಸರಿಸುವರಾದರೆ /
ಕೂರುವರು ಸದಾಕಾಲ ಅವರ ಮಕ್ಕಳ ನಿನ್ನಾ
ಸಿಂಹಾಸನದ ಮೇಲೆ”
13 : ಆರಿಸಿಕೊಂಡಿಹನು ಪ್ರಭು ಸಿಯೋನ್
ನಗರವನು /
ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು
14 : “ಎಂದೆಂದಿಗು ಇದೇ ನನ್ನ ನಿವಾಸ /
ಇರುವೆನಿಲ್ಲೇ, ಇದು ನನ್ನ ಅಭಿಲಾಶ
15 : ಇದಕ್ಕೊದಗಿಸುವೆನು ಧಾರಾಳ
ಸಿರಿಸಂಪತ್ತನು /
ಅನ್ನದಿಂದ ತೃಪ್ತಿಪಡಿಸುವೆನಿಲ್ಲಿಯ
ದಲಿತರನು
16 : ಹೊದಿಸುವೆನಿದರ ಯಾಜಕರಿಗೆ
ರಕ್ಷಣಾವಸ್ತ್ರವನು /
ಸಾಧುಸಂತರು ಮಾಡುವರಿದರ
ಹರ್ಷೋದ್ಗಾರವನು
17 : ಕೋಡೊಂದು ಮೂಡುವಂತೆ ಮಾಡುವೆ
ದಾವೀದನಿಗಿಲ್ಲೆ /
ನಂದಾದೀಪ ಬೆಳಗುವಂತೆ ಮಾಡುವೆ ನನ್ನ
ಅಭಿಷಿಕ್ತನಿಗಿಲ್ಲೆ
18 : ತೊಡಿಸುವೆನು ಅವನ ವೈರಿಗಳಿಗೆ
ಲಜ್ಜಾಕವಚವನು /
ಮುಡಿಸುವೆನು ಅವನಿಗಾದರೋ ಪ್ರಜ್ವಲ
ಕಿರೀಟವನು” //