1 : ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ / ಕೇಳುವೆ: “ನನಗೆ ಒತ್ತಾಸೆ ಎತ್ತಣಿಂದ?”
2 : ನನಗೆ ಒತ್ತಾಸೆ ಪ್ರಭುವಿನಿಂದ /
ಭೂಮ್ಯಾಕಾಶ ಸೃಜಿಸಿದವನಿಂದ
3 : ನಿನ್ನ ಕಾಲೆಡವದಂತೆ ನೋಡುವನಾತ /
ತೂಕಡಿಸಲಾರನು ನಿನ್ನ ಕಾಯುವಾತ
4 : ಇಗೋ, ಇಸ್ರಯೇಲನು ಕಾಯುವಾತನು /
ನಿದ್ರಿಸಲಾರನು, ತೂಕಡಿಸಲಾರನು
5 : ನಿನ್ನನು ಕಾಯುತಿಹನು ಪ್ರಭುವೇ /
ಬಲಗಡೆ ನೆರಳಂತಿಹನು ವಿಭುವೇ
6 : ನಿನ್ನ ಬಾಧಿಸನು ಸೂರ್ಯನು ಹಗಲೊಳು /
ನಿನ್ನ ಪೀಡಿಸನು ಚಂದ್ರನು ಇರುಳೊಳು
7 : ಪ್ರಭು ಕಾಯುವನು ನಿನ್ನ ಪ್ರಾಣವನು /
ಸಕಲ ಕೇಡಿನಿಂದ ಕಾಪಾಡುವನು
8 : ಪ್ರಭು ಕಾಯುವನು ನಿನ್ನ ಆಗುಹೋಗುಗಳನು /
ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು //