1 :
ನಮಗಲ್ಲ ಹೇ ಪ್ರಭು.
ನಮಗಲ್ಲ ಮಹಿಮೆ /
ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ /
ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ //
2 : ಅನ್ಯ ಜನರು ನುಡಿಯುವುದೆಂತು: /
“ಅವರ ದೇವರೆಲ್ಲಿ?” ಎಂದು //
3 : ಪರದಲ್ಲಿಹನು ನಮ್ಮ ದೇವನು /
ಗೈವನು ತನಗಿಷ್ಟ ಬಂದುದನು //
4 : ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ /
ಅವು ಮಾನವನ ಕೈ ಕೆಲಸಗಳು ಮಾತ್ರ //
5 : ಬಾಯಿದ್ದರೂ ಅವು ಮಾತಾಡುವುದಿಲ್ಲ /
ಕಣ್ಣುಗಳಿದ್ದರೂ ಅವು ಕಾಣುವುದಿಲ್ಲ //
6 : ಕಿವಿಯಿದ್ದರೂ ಅವು ಕೇಳುವುದಿಲ್ಲ /
ಮೂಗಿದ್ದರೂ ಅವು ಮೂಸುವುದಿಲ್ಲ /
ಗಂಟಲೊಳು ಅವಕೆ ಶಬ್ದವೇ ಇಲ್ಲ //
7 : ಕೈಯಿದ್ದರೂ ಅವು ಮುಟ್ಟುವುದಿಲ್ಲ /
ಕಾಲಿದ್ದರೂ ಅವು ನಡೆಯುವುದಿಲ್ಲ //
8 : ಅವುಗಳಂತಾಗುವರು ಅವುಗಳನು
ಮಾಡುವವರು /
ಅವುಗಳಂತಾಗುವರು ಅವುಗಳನು
ನಂಬುವವರು //
9 : ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ /
ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
10 : ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ /
ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
11 : ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತ ಜನರಿಗೆ /
ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
12 : ಆಶೀರ್ವದಿಸುವನು ಪ್ರಭು ಮರೆಯದೆ
ನಮ್ಮನು /
ಇಸ್ರಯೇಲ್ ವಂಶವನು, ಆರೋನನ
ಕುಲವನು //
13 : ಆಶೀರ್ವದಿಸುವನು ಪ್ರಭು ತನ್ನಲಿ
ಭಯಭಕ್ತಿಯುಳ್ಳವರನು /
ಚಿಕ್ಕವರು ದೊಡ್ಡವರೆನ್ನದೆ
ಭಯಭಕ್ತಿಯುಳ್ಳವರನು //
14 : ವೃದ್ಧಿಗೊಳಿಸಲಿ ಪ್ರಭುವು ನಿಮ್ಮನು /
ವೃದ್ಧಿಗೊಳಿಸಲಿ ನಿಮ್ಮ ಮಕ್ಕಳನು //
15 : ಇಹಪರಗಳನು ಉಂಟುಮಾಡಿದ ಪ್ರಭುವಿಂದ /
ಲಭಿಸುವಂತಾಗಲಿ ನಿಮಗೆ ಆಶೀರ್ವಾದ //
16 : ಪ್ರಭುವಿಗೆ ಸ್ವಂತವಾದುದು ಪರಲೋಕ /
ನರರಿಗೆ ಕೊಟ್ಟಿಹನಾತನು ಭೂಲೋಕ //
17 : ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು /
ಕೀರ್ತಿಸರು ಪಾತಾಳಕ್ಕಿಳಿವವರು ಆತನನು //
18 : ನಾವಾದರೋ ಪ್ರಭುವನು ಹೊಗಳಿ
ಹಾಡುವೆವು /
ಇಂದಿಗೂ ಎಂದೆಂದಿಗೂ ಹೊಗಳಿ
ಹಾಡುವೆವು //
ಅಲ್ಲೆಲೂಯ.