1 : ನಾನು ಆಶ್ರಯಿಸಿಕೊಂಡಿರಲು ಪ್ರಭುವನು / ನೀವು ಹೇಳುವುದೆಂತು ನನಗೀ ಮಾತನು: //
2 : “ನೇರ ಮನಸ್ಕರನು ಕೊಲ್ಲಲು ಇರುಳೊಳು |
ಬಿಲ್ಲು ಬಗ್ಗಿಸಿಹರಿದೋ ಆ ದುರುಳರು |
ಎದೆಗೆ ಬಾಣವನು ಹೂಡಿ ನಿಂತಿರುವರು” ||
3 : “ಓಡಿರಿ, ಪಕ್ಷಿಪಾರಿವಾಳಗಳಂತೆ
ಗಿರಿಶಿಖರಗಳಿಗೆ |
ಅಸ್ತಿವಾರವೆ ಕಿತ್ತಿರಲು, ಗತಿಯೆನಿತು
ಸತ್ಯವಂತರಿಗೆ?” ||
4 : ಪ್ರಭು ಪ್ರಸನ್ನವಿರುವನು ಪವಿತ್ರಾಲಯದಲಿ / ಸ್ಥಾಪಿಸಿಹನು ಸಿಂಹಾಸನವನು ಪರದಲಿ / ನರಮಾನವರನು ನೋಡುತಿಹನು ನೇತ್ರಗಳಲಿ / ಪರೀಕ್ಷಿಸುತಿಹನು ಅವರನು ಸೂಕ್ಷ್ಮ ರೀತಿಯಲಿ //
5 : ಪರೀಕ್ಷಿಸುವನು ಪ್ರಭು ಸಜ್ಜನ ದುರ್ಜನರನು /
ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು //
6 : ಅಗ್ನಿಗಂಧಕಗಳನು ದುರುಳರ ಮೇಲೆ
ಮಳೆಗರೆಯಲಿ /
ಉರಿಗಾಳಿಯೆ ಅವರ ಪಾಲಿನ
ಧೂಮಪಾನವಾಗಲಿ //
7 : ಸತ್ಯಸ್ವರೂಪನಾದ ಪ್ರಭು ಸತ್ಯ ಪ್ರಿಯನು /
ಸತ್ಪುರುಷನು ಸೇರುವನು ಆತನ
ಸನ್ನಿಧಿಯನು //