1 :
ಹೇ ದೇವಾ, ನೀ ಸ್ತುತಿಗೆ
ಯೋಗ್ಯ /
ನೀನು ಸುಮ್ಮನಿರುವುದು ಸರಿಯಾ? //
2 : ತೆರೆದಿಹರು ಬಾಯಿ ದುರುಳರು, ವಂಚಕರು
ನನಗೆದುರಾಗಿ /
ಸುಳ್ಳು ನಾಲಿಗೆಗಳು ಆಡುತ್ತಿವೆ ನನಗೆ
ವಿರುದ್ಧವಾಗಿ /
3 : ಹಾಕಿಹರು ದ್ವೇಷತುಂಬಿದ ಮಾತುಗಳ
ಮುತ್ತಿಗೆ /
ನನ್ನ ಎದುರಿಸುತಿಹರು ನಿಷ್ಕಾರಣವಾಗಿಯೆ //
4 : ಪ್ರೀತಿಗೆ ಪ್ರತಿಯಾಗಿ ಮಾಡುತಿಹರು ಆಪಾದನೆ /
ಆದರೂ ಮಾಡುತ್ತಿರುವೆ ಅವರಿಗಾಗಿ
ಪ್ರಾರ್ಥನೆ //
5 : ಉಪಕಾರಕ್ಕೆ ಅಪಕಾರವನ್ನೆಸಗಿಹರು /
ಗೆಳೆತನಕ್ಕೆ ಹಗೆತನವನ್ನೇ ತೋರಿಹರು //
6 : ತಪ್ಪುಹೊರಿಸುವವನನು ನಿಲ್ಲಿಸು ಆ ಶತ್ರುವಿನ
ಬಲಗಡೆಗೆ /
ಗುರಿಪಡಿಸು ಅವನನು ಭ್ರಷ್ಟ ನ್ಯಾಯಾಧೀಶನ
ತೀರ್ಪಿಗೆ //
7 : ಅಪರಾಧಿಯಾಗಲಿ ಅವನು
ನ್ಯಾಯವಿಚಾರಣೆಯಲಿ /
ಅವನ ಪ್ರಾರ್ಥನೆಯೂ ಪಾಪವಾಗಿ
ಎಣಿಸಲ್ಪಡಲಿ //
8 : ಅಲ್ಪವಾಗಿರಲಿ ಅವನ ಜೀವನಾವಧಿ /
ಮತ್ತೊಬ್ಬನದಾಗಲಿ ಅವನಾಸ್ತಿಪಾಸ್ತಿ //
9 : ತಬ್ಬಲಿಗಳಾಗಲಿ ಅವನ ಮಕ್ಕಳುಮರಿ /
ವಿಧವೆಯಾಗಲಿ ಅವನ ನಾರಿಮಣಿ //
10 : ತಿರುಕರಂತೆ ಅಲೆಯಲಿ ಅವನ ಮಕ್ಕಳು
ಭಿಕ್ಷೆಬೇಡುತ /
ಹೊರದೂಡಲ್ಪಡಲಿ ತಮ್ಮ
ಪಾಳುಬಿದ್ದಾಮನೆಗಳಿಂದ //
11 : ಕಸಿದುಕೊಳ್ಳಲಿ ಅವನದೆಲ್ಲವನು ಸಾಲಿಗನು /
ಸುಲಿದುಕೊಳ್ಳಲಿ ಪರರು ಅವನ
ಕಷ್ಟಾರ್ಜಿತವನು //
12 : ಕರುಣೆತೋರುವವನಾರೂ ಅವನಿಗಿಲ್ಲ
ವಾಗಲಿ /
ಅವನ ತಬ್ಬಲಿ ಮಕ್ಕಳನಾರೂ
ಕನಿಕರಿಸದಿರಲಿ //
13 : ನಿರ್ಮೂಲವಾಗಲಿ ಅವನಾ ಪೀಳಿಗೆ /
ನಿರ್ನಾಮವಾಗಲಿ ಮರುವಂಶದೊಳಗೆ //
14 : ಮರೆಯದಿರಲಿ ಪ್ರಭು ಅವನಾ ಹಿರಿಯರ
ದೋಷವನು /
ಪರಿಹರಿಸದಿರಲಿ ಅವನ ತಾಯಿಯು ಗೈದ
ಪಾಪವನು //
15 : ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ /
ಅವನ ಹೆಸರೇ ಇಲ್ಲದಂತಾಗಲಿ ಧರೆಯಲಿ //
16 : ಯಾರೊಬ್ಬನಿಗು ಮರುಕತೋರೆ
ಮರೆತುಬಿಟ್ಟನವನು /
ಕೊಲ್ಲಲು ಯತ್ನಿಸಿದನು ದೀನರನು,
ಮನಗುಂದಿದವರನು //
17 : ಅವನಿಗೆ ಪ್ರಿಯ ಶಪಿಸುವುದೆಂದರೆ,
ಎರಗಲಿದೀಗ ಅವನ ಮೇಲೇ /
ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ
ಅವನಿಗದು ದೂರದಲೇ //
18 : ಶಪಿಸುವುದೆಂದರೆ ಅವನಿಗೆ
ಉಡಿಗೆತೊಡಿಗೆಯಂತೆ /
ಇಳಿಯಲಿ ಅದೀಗ ಅವನ ದೇಹಕೆ ನೀರಿ
ನಂತೆ /
ಸೇರಲಿ ಅದೀಗ ಅವನ ಕೀಲಿಗೆ ಎಣ್ಣೆಯಂತೆ //
19 : ಅವನಿಗಿರಲಿ ಶಾಪ ಹೊದಿಕೆಯಂತೆ /
ಅದುವೆ ಅನುದಿನದ ನಡುಗಟ್ಟಂತೆ //
20 : ನನಗೆದುರಾಡಿ ತಪ್ಪು ಹೊರಿಸುವವರಿಗೆ /
ಅದುವೇ ಪ್ರಭುವಿನಿಂದ ಗಿಟ್ಟುವ ಕೊಡುಗೆ //
21 : ಹೇ ಪ್ರಭು, ದೇವಾ, ನನ್ನನಾದರಿಸು
ಅಕ್ಕರೆಯಿಂದ /
ನನ್ನ ಪಕ್ಷವಹಿಸಿ ರಕ್ಷಿಸು ನಿನ್ನ ನಾಮದ
ಪ್ರಯುಕ್ತ //
22 : ಬಡವ ನಾನು, ನನಗಿದೆ ಕುಂದುಕೊರತೆ /
ನನ್ನ ಎದೆಗೆ ಅಲಗೇ ನಾಟಿದಂತಿದೆ //
23 : ನಾ ಗತಿಸಿಹೋಗುತ್ತಿರುವೆ ಬೈಗಿನ ನೆರಳಂತೆ /
ಬಿರುಗಾಳಿ ಕೊಂಡೊಯ್ಯುವ ಮಿಡತೆಯಂತೆ //
24 : ಬಡಕಲಾಯಿತೆನ್ನ ದೇಹ ಬರಡಿಲ್ಲದೆ /
ನಡುಕಹುಟ್ಟಿತು ಕಾಲಿಗೆ ತ್ರಾಣವಿಲ್ಲದೆ //
25 : ಗುರಿಯಾಗಿರುವೆನು ನಾ ಜನರ ಅಪಹಾಸ್ಯಕ್ಕೆ /
ನೋಡುವವರು ತಲೆಯಾಡಿಸಿ ಮಾಡುವ
ನಿಂದೆಗೆ //
26 : ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ /
ಅಚಲಪ್ರೀತಿಯಿಂದ ನನ್ನ ರಕ್ಷಿಸಯ್ಯಾ //
27 : ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು
ಅವರರಿಯಲಿ /
ಅದು ನಿನ್ನಿಂದಲೇ ಹೇ ಪ್ರಭು, ಆದುದೆಂದು
ಖಚಿತವಾಗಲಿ //
28 : ಅವರೆನ್ನನು ಶಪಿಸಿದರೂ ನೀನೆನ್ನನು ಹರಸು /
ನನ್ನೆದುರಾಳಿಗೆ ಅಪಮಾನವನು ಹೊರಿಸು /
ನಿನ್ನ ದಾಸನೆನಗೆ ಆನಂದವನು ಪಾಲಿಸು //
29 : ಮಾನಭಂಗವಾಗಲಿ ನನ್ನಾ ನಿಂದಕರಿಗೆ /
ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ //
30 : ಕೊಂಡಾಡುವೆನು ಪ್ರಭುವನು ಬಹಳವಾಗಿ /
ಕೀರ್ತಿಸುವೆನು ಆತನನು ಸಾಮೂಹಿಕವಾಗಿ //
31 : ನಿಂತಿರುವನು ಪ್ರಭು ಬಡವನ ಬಲಗಡೆ /
ವಿಧಿಸುವವರಿಂದ ತಪ್ಪಿಸುವನು
ಮರಣದಂಡನೆ //