1 : ಸ್ಥಿರವಿದೆ ದೇವಾ, ಸುಸ್ಥಿರವಿದೆ
ನನ್ನ ಮನ /
ಹಾಡುತ ಪಾಡುತ ರಚಿಸುವೆನಿದೋ ಕವನ //
2 : ಚೇತನಗೊಳ್ಳು, ಮನವೇ ಚೇತನಗೊಳ್ಳು /
ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು /
ನಾನೆಬ್ಬಿಸುವೆನು ಬೆಳಗಿನ ಜಾವವನು //
3 : ನಿನ್ನ ಸ್ತುತಿಸುವೆನು ಪ್ರಭು, ಜನಾಂಗಗಳ
ಮುಂದೆ /
ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ //
4 : ವಿೂರಿದೆ ನಿನ್ನಚಲಪ್ರೀತಿ ಗಗನ ಮಂಡಲವನು /
ಮುಚ್ಚಿದೆ ನಿನ್ನ ಸತ್ಯಸಂಧತೆ
ಮೇಘರಾಶಿಯನು //
5 : ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಶೋಭೆ / ಭೂಮಂಡಲದೊಳು ಹಬ್ಬಿ ಹರಡಲಿ ನಿನ್ನಾ ಪ್ರತಿಭೆ //
6 : ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು /
ನಿನ್ನ ಭುಜಬಲದಿಂದ ನಮ್ಮನು
ಜಯಗೊಳಿಸು //
7 : ಗರ್ಭಗುಡಿಯಿಂದಲೆ ದೇವನಿಂತೆಂದನು: /
“ಜಯಶೀಲ ನಾನು, ಹಂಚುವೆನು
ಶೆಖೆಮನು /
ಅಳೆದುಕೊಡುವೆನು ಸುಖೋತೆಂಬ
ಬಯಲನು //
8 : ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ /
ಎಫ್ರಯಿಮ್ ಗೋತ್ರವು ಶಿರಸ್ತ್ರಾಣ ನನಗೆ /
ಜೂದಕುಲ ರಾಜದಂಡವಾಗಿದೆ ನನ್ನ ಕೈಗೆ //
9 : ಮೋಹಾಬ್ ಪ್ರಾಂತ್ಯವು ನನ್ನ ಸ್ನಾನಪಾತ್ರೆಯು /
ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ,
ಎಡೆಯು /
ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು?”//
10 : ಕೋಟೆ ನಗರಕೆ ನನ್ನನು
ಕರೆದೊಯ್ಯುವವರಾರು? /
ಎದೋಮ್ ಪ್ರಾಂತ್ಯಕೆ ನನ್ನ
ಕೊಂಡೊಯ್ಯುವವರಾರು? //
11 : ದೇವಾ, ನೀ ನಮ್ಮನು ಕೈಬಿಟ್ಟಿರುವುದು
ಸರಿಯೋ? /
ನಮ್ಮ ಸೈನ್ಯ ಸಮೇತ ನೀ ಬರದೆ
ಹೋದೆಯೋ? //
12 : ಶತ್ರುವಿರುದ್ಧ ಸಹಾಯಮಾಡಯ್ಯಾ /
ಮಾನವನ ನೆರವು ನಮಗೆ ಬರಡಯ್ಯಾ //
13 : ನಮ್ಮ ಪರ ದೇವನಿರಲು ಹೆಣಗುವೆವು
ಶೂರರಾಗಿ /
ವೈರಿಗಳನು ತುಳಿದುಬಿಡುವನು ಆತ
ಖರೆಯಾಗಿ //