1 : ಕೃತಜ್ಞತೆಯಿಂದ ಸಲ್ಲಿಸಿರಿ
ಪ್ರಭುವಿಗೆ ಸ್ತುತಿಯನು /
ಆತನ ಪ್ರೀತಿ ಶಾಶ್ವತ, ಆತನು
ಒಳ್ಳೆಯವನು //
2 : ಸ್ತುತಿಸಲಿ ಆತನನು ವಿಮುಕ್ತಿ ಪಡೆದವರೆಲ್ಲರು /
ಶತ್ರುಗಳಿಂದ ಬಿಡುಗಡೆ ಹೊಂದಿದವರೆಲ್ಲರು //
3 : ಅಂತೆಯೇ ವಂದಿಸಲಿ ಬಂದವರು
ಚತುರ್ದಿಕ್ಕುಗಳಿಂದ /
ಒಂದಾಗಿ ಕೂಡಿಸಲ್ಪಟ್ಟವರೆಲ್ಲರು ನಾನಾ
ದೇಶಗಳಿಂದ //
4 : ಅಲೆದರು ಮರುಳುಗಾಡಿನಲಿ ದಾರಿಕಾಣದೆ /
ಬಳಲಿದರು ಜನರಿರುವ ಊರು ಸಿಗದೆ //
5 : ನರಳಿದರು ಹಸಿವೆ ಬಾಯಾರಿಕೆಯಿಂದ /
ಸೊರಗಿದರು ಮನೋಯಾತನೆಯಿಂದ //
6 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ /
ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
7 : ಸರಿಯಾದ ದಾರಿಯಲಿ ನಡೆಸಿದನವರನು /
ಸೇರಮಾಡಿದನು ಜನವಾಸಿಸುವ ಊರನು //
8 : ಹೊಗಳಲಿ ಪ್ರಭುವಿನಚಲ ಪ್ರೀತಿಯನು /
ಜನರಿಗೆ ಆತನೆಸಗಿದ ಅತಿಶಯಗಳನು //
9 : ಬಾಯಾರಿದವರ ಆಸೆಯನ್ನಾತ ಪೂರೈಸಿದನು /
ಹಸಿದವರನು ಮೃಷ್ಟಾನ್ನದಿಂದ
ತೃಪ್ತಿಪಡಿಸಿದನು //
10 : ದೇವರಾಜ್ಞೆಯನು ವಿರೋಧಿಸಿದ ಕಾರಣ /
ಪರಾತ್ಪರನಾಜ್ಞೆಯನು ಹೀಗಳೆದ ಕಾರಣ //
11 : ಕುಳಿತಿದ್ದರವರು ಕತ್ತಲಲಿ, ಕಗ್ಗತ್ತಲಲಿ /
ನರಳುತ್ತಿದ್ದರು ಬಂಧಿತರಾಗಿ ಬೇಡಿಗಳಲಿ //
12 : ಕರಗಿತ್ತವರ ಹೃದಯ ಕಡುಕಷ್ಟದಿಂದ /
ಎಡವಿ ಬಿದ್ದಿದ್ದರು ಅಸಹಾಯತೆಯಿಂದ //
13 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ /
ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ //
14 : ಕತ್ತಲು, ಕಗ್ಗತ್ತಲಿಂದವರನು ಹೊರತಂದನು /
ಅವರ ಬೇಡಿಬಂಧನಗಳನು
ಮುರಿದುಹಾಕಿದನು //
15 : ಹೊಗಳಲಿ ಪ್ರಭುವಿನಚಲ ಪ್ರೀತಿಯನು /
ಜನರಿಗಾತ ಎಸಗಿದ ಅತಿಶಯಗಳನು //
16 : ಚೂರುಚೂರುಗೈದನು ಕಂಚಿನ ಕದಗಳನು /
ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು //
17 : ರೋಗಿಗಳಾದರವರು ಅನಾಚಾರದ ನಿಮಿತ್ತ /
ಬಾಧೆಗೊಳಗಾದರು ಪಾಪಕಾರ್ಯಗಳ ನಿಮಿತ್ತ //
18 : ಅಸಹ್ಯಪಟ್ಟರು ಅನ್ನಆಹಾರಗಳಿಗೆ /
ಹತ್ತಿರವಾದರವರು ಮೃತ್ಯುದ್ವಾರಕೆ //
19 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ /
ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
20 : ಗುಣಪಡಿಸಿದನವರನು ತನ್ನ ವಾಣಿಯಿಂದ /
ತಪ್ಪಿಸಿದನು ಅವರನು ವಿನಾಶಕೂಪದಿಂದ //
21 : ಹೊಗಳಲಿ ಪ್ರಭುವಿನಚಲ ಪ್ರೀತಿಯನು /
ಜನರಿಗಾತ ಎಸಗಿದ ಅತಿಶಯಗಳನು //
22 : ಸಮರ್ಪಿಸಲಿ ಆತನಿಗೆ ಕೃತಜ್ಞತಾ ಬಲಿಗಳನು /
ಹಾಡಿಹೊಗಳಲಿ ಆತನಾ ಮಹತ್ಕಾರ್ಯಗಳನು //
23 : ಹಡಗನು ಹತ್ತಿ ಕಡಲನು ದಾಟಿದರು /
ಸಾಗರ ಹಾಯ್ದು ವ್ಯಾಪಾರ ಗೈದರು //
24 : ಕಂಡರು ಪ್ರಭುವಿನ ಪವಾಡಗಳನು /
ಸಮುದ್ರದೊಳಾತನ ಅದ್ಭುತಗಳನು //
25 : ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕೆ /
ತರಂಗಗಳು ಭೋರ್ಗರೆದವು ಅದರೊಂದಿಗೆ //
26 : ಗಗನಕ್ಕೇರಿದರು, ಅಗಾಧಕ್ಕಿಳಿದರು /
ಗಂಡಾಂತರಕೆ ಸಿಲುಕಿ ಕರಗಿಹೋದರು //
27 : ಅಡ್ಡಾಡಿದರು, ಹೊಯ್ದಾಡಿದರು ಕುಡುಕ ರಂತೆ / ದಿಕ್ಕುತೋರದವರಾದರು ದಕ್ಷತೆ ಸಾಲದೆ //
28 : ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ /
ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
29 : ಆ ಬಿರುಗಾಳಿಯನಾತ ಶಾಂತಪಡಿಸಿದ /
ನಿಂತುಹೋಯಿತಾ ಸಮುದ್ರದಲೆಗಳ
ಮೊರೆತ //
30 : ತಂದಿತು ಪ್ರಶಾಂತತೆ ಸಂತಸವನವರಿಗೆ /
ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ //
31 : ಹೊಗಳಲಿ ಪ್ರಭುವಿನಚಲ ಪ್ರೀತಿಯನು /
ಜನರಿಗಾತ ಎಸಗಿದ ಅತಿಶಯಗಳನು //
32 : ಕೀರ್ತಿಸಲಿ ಆತನನು ನೆರೆದ ಸಭೆಯಲಿ /
ಹಾಡಿಹೊಗಳಲಿ ಹಿರಿಯರಾ ಕೂಟದಲಿ //
33 : ನೀಚ ನಿವಾಸಿಗಳ ಕಾರಣದಿಂದ /
ನದಿಗಳನೂ ಮರುಭೂಮಿಯಾಗಿಸಿದ //
34 : ಒಣನೆಲವಗಿಸಿದನಾತ ಬುಗ್ಗೆಗಳನು /
ಉಪ್ಪುನೆಲವಾಗಿಸಿದ ಫಲಭೂಮಿಯನು //
35 : ಕೆರೆಯಾಗಿಸಿದಾ ಮರುಭೂಮಿಯನು /
ಊಟೆಯಾಗಿಸಿದ ಆ ಒಣನೆಲವನು //
36 : ಹಸಿದವರನು ನೆಲೆಗೊಳಿಸಿದನಲ್ಲಿ /
ವಾಸಿಸಲು ನಗರವನು ಕಟ್ಟಿದರಲ್ಲಿ //
37 : ಉತ್ತು ಬಿತ್ತಿದರು, ನೆಟ್ಟರು ದ್ರಾಕ್ಷಾಲತೆಯನು /
ಕೂಡಿಸಿಕೊಂಡರು ಅಧಿಕವಾದ
ಆದಾಯವನು //
38 : ಅಭಿವೃದ್ಧಿಯಾದರು
ಆತನಾಶೀರ್ವಾದದಿಂದಲೆ /
ಅವರಿಗಿರಲಿಲ್ಲ ದನಕರುಗಳಾವುದರ ಕೊರತೆ //
39 : ತದನಂತರ ಕುಗ್ಗಿತವರ ಅಂಕೆ ಸಂಖ್ಯೆ /
ಕಷ್ಟಸಂಕಟ, ತಾಪತ್ರಯಗಳ ಮಧ್ಯೆ //
40 : ತೃಣೀಕರಿಸಿದನು ಪ್ರಭು ಅವರಧಿಪತಿಗಳನು /
ದಾರಿಯಿಲ್ಲದರಣ್ಯದೊಳು ಅಲೆದಾಡಿಸಿದನು //
41 : ದೀನರನ್ನೇರಿಸಿದನು ಅವನತಿಯಿಂದ ಉನ್ನತಿಗೆ /
ಹೆಚ್ಚಿಸಿದನವರ ಸಂತತಿಯನು ಕುರಿಮಂದೆ
ಹಾಗೆ //
42 : ಇದಕಂಡು ಹಿಗ್ಗುವರು ಸಜ್ಜನರೆಲ್ಲರು /
ಬಾಯಿ ಮುಚ್ಚಿಕೊಳ್ಳುವರು ದುರ್ಜನರು //
43 : ಪರ್ಯಾಲೋಚಿಸಲಿವುಗಳನು
ಬುದ್ಧಿವಂತರು /
ಗ್ರಹಿಸಲಿ ಪ್ರಭುವಿನಚಲ ಪ್ರೀತಿಯನಾ
ಜನರು //