1 : ಪ್ರಭು ದಯಾಪೂರಿತ, ಆತನ
ಪ್ರೀತಿ ಶಾಶ್ವತ /
ತೋರಿ ಆತನಿಗೆ ನಿಮ್ಮ ಸ್ತೋತ್ರ
ಕೃತಜ್ಞತಾ //
2 : ವರ್ಣಿಸಬಲ್ಲವನಾರು ಆತನ
ಮಹತ್ಕಾರ್ಯಗಳನು?/
ಯೋಗ್ಯರೀತಿಯಲಿ ಹೊಗಳಬಲ್ಲವರಾರು
ಆತನನು? //
3 : ನ್ಯಾಯದಂತೆ ನಡೆಯುವವರು ಧನ್ಯರು /
ಅವಿರತವಾಗಿ ನೀತಿವಂತರು ಧನ್ಯರು //
4 : ಮರೆಯಬೇಡೆನ್ನನು ಪ್ರಭು, ನಿನ್ನ ಪ್ರಜೆಗೆ
ದಯೆತೋರುವಾಗ /
ನೆರವು ನೀಡೆನಗೆ ಸ್ವಾಮಿ, ನೀನಾ ಜನರನು
ಉದ್ಧರಿಸುವಾಗ //
5 : ನೀನಾರಿಸಿಕೊಂಡಿರುವ ಪ್ರಗತಿಯನು ನಾ
ಕಾಣಮಾಡು /
ನಿನ್ನ ಜನಾಂಗದವರ ಸಂತಸವನು ನಾ
ಸವಿಯಮಾಡು /
ನಿನ್ನ ಸ್ವಕೀಯರ ಮಹಿಮೆಯಲ್ಲೆನಗೆ ಪಾಲನ್ನು
ನೀಡು //
6 : ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು /
ಅಕ್ರಮಗೈದೆವು, ಅಪರಾಧಿಗಳಾದೆವು //
7 : ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು
ಈಜಿಪ್ಟಿನಲಿ /
ಸ್ಮರಿಸಲಿಲ್ಲವರು ನಿನ್ನಚಲ
ಪ್ರೇಮಾತಿಶಯಗಳನು ಅಲ್ಲಿ /
ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು
ಕೆಂಗಡಲಬಳಿ //
8 : ಆದರೂ ತನ್ನ ನಾಮಪ್ರಯುಕ್ತ
ರಕ್ಷಿಸಿದನವರನು /
ಪ್ರಕಟಿಸಿದನಾತ ಹೀಗೆ ತನ್ನ
ಶಕ್ತಿಸಾಮಥ್ರ್ಯವನು //
9 : ಒಣಗಿಹೋಯಿತಾ ಕೆಂಗಡಲು ಆತನ
ಗದರಿಕೆಗೆ /
ದಾಟಿಸಿದನಾ ಸಾಗರವನು ಅಡವಿಯೋ ಎಂಬ
ಹಾಗೆ //
10 : ತಪ್ಪಿಸಿದನವರನು ವೈರಿಗಳ ಕೈಯಿಂದ /
ರಕ್ಷಿಸಿದನು ಆ ಶತ್ರುಗಳ ಹಿಡಿತದಿಂದ //
11 : ಮುಳುಗಿಸಿತು ಜಲರಾಶಿ ಆ ಶತ್ರುಗಳನು /
ಉಳಿಯಗೊಡಿಸಲಿಲ್ಲ ಅವರಲ್ಲೊಬ್ಬನನು //
12 : ಆಗ ನಂಬಿದರು ಪ್ರಭುವಿನಾ ಮಾತನು /
ಮಾಡಿದರಾಗ ಆತನ ಗುಣಗಾನವನು //
13 : ಆದರೆ ಮರೆತರು ಬೇಗನೆ ಆತನ
ಸತ್ಕಾರ್ಯಗಳನು /
ಕಾಯದೆ ಹೋದರು ಆತನಾ ಸಂಕಲ್ಪ
ಸಾಧನೆಯನು //
14 : ಆಶಾಪಾಶಗಳಿಗೆ ಈಡಾದರು ಅಡವಿಯೊಳು /
ದೇವನನೇ ಪರಿಶೋಧಿಸಿದರು ಅರಣ್ಯದೊಳು //
15 : ಪೂರೈಸಿದನಾತ ಅವರ ಕೋರಿಕೆಯನು /
ಕಳುಹಿಸಿದನಾದರೆ ಭೀಕರ ರೋಗವನು //
16 : ಅಸೂಯೆಗೊಂಡರು ಪಾಳೆಯದೊಳು
ಮೋಶೆಯ ಮೇಲೆ /
ಪ್ರಭುವಿಗೆ ಪ್ರತಿಷ್ಟಿತನಾದ ಆ ಆರೋನನ
ಮೇಲೆ //
17 : ಭೂಮಿ ಬಾಯ್ದೆರೆದು ನುಂಗಿತು ದಾತಾನನನು /
ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು //
18 : ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು /
ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು //
19 : ಹೋರೇಬಿನಲಿ ಮಾಡಿದರು ಬಸವನನು /
ಆರಾಧಿಸಿದರು ಆ ಎರಕದ ಶಿಲೆಯನು //
20 : ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ
ದೇವರನು /
ಆರಿಸಿಕೊಂಡರು ಹುಲ್ಲುತಿನ್ನುವ ಬಸವನ
ವಿಗ್ರಹವನು //
21 : ಮರೆತುಬಿಟ್ಟರವರು ತಮ್ಮ ಮುಕ್ತಿದಾತ
ದೇವನನು /
ಈಜಿಪ್ಟಿನಲ್ಲಾತ ಎಸಗಿದ
ಮಹತ್ಕಾರ್ಯಗಳನು //
22 : ಹಾಮನಾಡಿನಲಿ ಮಾಡಿದ ಅದ್ಭುತಗಳನು /
ಕೆಂಗಡಬಳಿ ನಡೆದ ಘೋರ ಕೃತ್ಯಗಳನು //
23 : ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು
ಅವರನು /
ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು /
ಸಂಹರಿಸದಂತೆ ಶಮನಗೊಳಿಸಿದನಾ
ಕೋಪವನು //
24 : ಅವರೊ ಬೇಡವೆಂದರು ಆ ಚೆಲುವಿನ ನಾಡನು /
ನಂಬದೆ ಹೋದರು ಅವನಿತ್ತಾ
ವಾಗ್ದಾನವನು //
25 : ಗೊಣಗುಟ್ಟಿದರು ತಮ್ಮ ಗುಡಾರಗಳಲಿ /
ನಂಬಿಕೆಯಿಡಲಿಲ್ಲ ಆತನ ಮಾತಿನಲಿ //
26 : ಈ ಕಾರಣ ಆಣೆಯಿಟ್ಟನು ಕೈಯೆತ್ತಿ: /
“ಬೀಳಮಾಡುವೆನು ನಿಮ್ಮನು ಅಡವಿಯಲಿ, //
27 : ಚದರಿಸುವೆನು ನಿಮ್ಮ ಸಂತಾನವನು
ಹೊರನಾಡುಗಳಲಿ /
ಅಳಿದು ಹೋಗುವರವರು ಅನ್ಯಜನಾಂಗಗಳ
ಮಧ್ಯೆಯಲಿ” /
28 : ಬಾಳ್‍ಪೆಗೋರ ದೇತೆಯ
ಊಳಿಗದವರಾದರು /
ಸತ್ತವರಿಗರ್ಪಿಸಿದ ಬಲಿಯನು
ಉಣ್ಣುವವರಾದರು //
ಅವರಕ್ರಮ ನಡತೆ ಪ್ರಭುವನು ಕೆಣಕಿತು /
ಭೀಕರ ವ್ಯಾಧಿ ಅವರ ಮಧ್ಯೆ ಹಬ್ಬಿತು //
30 : ಫಿನೆಹಾಸನೆದ್ದು ದಂಡಿಸಿದೊಡನೆ /
ನಿಂತುಹೋಯಿತು ಆ ಘೋರ ಬೇನೆ //
31 : ಆತ ಮಾಡಿದಾ ನೈಪುಣ್ಯ /
ಆಯಿತು ತಲಾಂತರಕು ಗಣ್ಯ //
32 : ಮೆರಿಬಾ ನದಿಯ ಬಳಿ ರೇಗಿಸಿದರಾತನನು /
ಹೀಗೆ ಬರಮಾಡಿದರು ಮೋಶೆಗೂ
ಹಾನಿಯನು //
33 : ನಿಂತರಾಗ ದೇವರಾತ್ಮನಿಗೆ ವಿರೋಧವಾಗಿ /
ನುಡಿಯಬೇಕಾಯಿತು ಮೋಶೆಯು
ಅವಿವೇಕವಾಗಿ //
34 : ಅನುಸರಿಸಲಿಲ್ಲ ಅವರು ಪ್ರಭುವಿನಾಜ್ಞೆಯನು /
ಆತ ಸಂಹರಿಸಲಿಲ್ಲ ಶೋಧಿಸಿದಾ ಜನರನು //
35 : ಅನ್ಯಜನರೊಡನವರು ಕಲೆತು
ಬೆರೆತುಹೋದರು /
ಅವರ ದುರಾಚಾರಗಳನ್ನೂ ಕಲಿತುಕೊಂಡರು //
36 : ಪೂಜೆಮಾಡಿದರು ಆ ಜನರ ವಿಗ್ರಹಗಳಿಗೆ / ಉರುಲಾದವು ಆ ವಿಗ್ರಹಗಳೆ ಅವರಿಗೆ //
37 : ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು /
ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು /
38 : ಸುರಿಸಿದರು ತಮ್ಮ ಮಕ್ಕಳ ನಿರ್ದೋಷ
ರಕ್ತವನು /
ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ
ಅವರನು /
ಹೊಲೆಮಾಡಿದರಿಂಥ ಕೊಲೆಗಳಿಂದ
ದೇಶವನು //
39 : ಅಶುದ್ಧರಾದರವರು ತಮ್ಮ ದುಷ್ಕøತ್ಯಗಳಿಂದ /
ದೇವದ್ರೋಹಿಗಳಾದರು ದುರಾಚಾರ
ಗಳಿಂದ //
40 : ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ /
ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ //
41 : ಎಂತಲೆ ಒಪ್ಪಿಸಿದನವರನು ಅನ್ಯರಾಷ್ಟ್ರಗಳ
ಕೈಗೆ /
ಹಗೆಮಾಡುತ್ತಿದ್ದವರೇ
ಅಧಿಕಾರಿಗಳಾದರವರಿಗೆ //
42 : ಗುರಿಯಾದರು ಶತ್ರುಶೋಷಣೆಗೆ /
ಕುಗ್ಗಿಹೋದವರು ಅವರ ಕೈಕೆಳಗೆ //
43 : ಪ್ರಭು ಪದೇಪದೇ
ವಿಮುಕ್ತಗೊಳಿಸಿದನಾದರೂ /
ಪರ್ಯಾಲೋಚಿಸದೆ ಪ್ರತಿಭಟನೆ
ಮಾಡಿದರವರು /
ಈ ಪರಿಯ ಅಕ್ರಮದ ನಿಮಿತ್ತ
ಅವನತಿಗಿಳಿದರು //
44 : ನೋಡಿದನಾತ ಅವರ ಕಷ್ಟಕಾರ್ಪಣ್ಯವನು /
ಗಮನಿಸಿದನು ಅವರ ಆರ್ತನಾದವನು //
45 : ನೆನಪಿಗೆ ತಂದುಕೊಂಡನು
ತನ್ನೊಡಂಬಡಿಕೆಯನು /
ದಯಾಳುತನದಿಂದ ತೋರಿದನವರಿಗೆ
ಕರುಣೆಯನು /
46 :
ಬಂಧಿಸಿದವರಿಂದಲೂ ದಯೆಯನು
ದೊರಕಿಸಿದನು //
47 : ಹೇ ಪ್ರಭು, ನಮ್ಮ ದೇವಾ, ನಮ್ಮನ್ನುದ್ಧರಿಸು /
ನಾಡುನಾಡುಗಳಿಂದ ನಮ್ಮನೊಂದುಗೂಡಿಸು /
ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು /
ನಿನ್ನಸ್ತುತಿ ಸ್ತೋತ್ರಗಳಲಿ ಹೆಚ್ಚಳ ಪಡುವೆವು //
48 : ಇಸ್ರಯೇಲಿನ ದೇವನಾದ ಪ್ರಭುವಿಗೆ ಸ್ತೋತ್ರ /
ಅನಾದಿಯಿಂದ ಯುಗಯುಗಾಂತರಕು
ಸ್ತೋತ್ರ /
ಜನರೆಲ್ಲರು ಹೇಳಲಿ ‘ಆಮೆನ್’, ಪ್ರಭುವಿಗೆ
ಸ್ತೋತ್ರ //