1 : ಸಲ್ಲಿಸಿ ಪ್ರಭುವಿಗೆ
ಕೃತಜ್ಞತಾಸ್ತೋತ್ರವನು /
ಮಾಡಿರಿ ಆತನ ನಾಮಸ್ಮರಣೆಯನು /
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು /
ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ /
ಹಿಗ್ಗಲಿ ಹೃದಯ, ಕೋರಿ ಆತನ
ದರ್ಶನ //
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ /
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
5 : ಆತನ ದಾಸ ಅಬ್ರಹಾಮನ ಸಂತತಿಯವರೇ /
ಆತನಾರಿಸಿಕೊಂಡ ಯಕೋಬನ
ವಂಶದವರೇ /
6 : ನೆನೆಯಿರಿ ಆತನದ್ಭುತಗಳನು,
ಮಹತ್ಕಾರ್ಯಗಳನು /
ಆತನ ವದನ ವಿಧಿಸಿದಾ
ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ ದೇವನೆಂಬುದು ಶ್ರುತ /
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು /
ಸಾವಿರಾರು ತಲೆಗಳವರೆಗೂ
ತನ್ನೊಪ್ಪಂದವನು //
9 : ಅಬ್ರಹಾಮನೊಡನೆ ಮಾಡಿಕೊಂಡ
ಒಡಂಬಡಿಕೆಯನು /
ಇಸಾಕನಿಗೆ ಆಣೆಯಿಟ್ಟು ಆತ
ಹೇಳಿದುದನು //
10 : ಯಕೋಬನಿಗೆ ರಾಜಶಾಸನವಾಗಿ
ಕೊಟ್ಟುದನು /
ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು //
11 : “ನಾ ಕೊಡುವೆನು ಕಾನಾನ್ ನಾಡನು ನಿಮಗೆ /
ಸ್ವಾಸ್ತ್ಯವಾಗುವುದು ಅದು ನಿಮ್ಮ ಸಂತತಿಗೆ”//
12 : ಅಲ್ಪಸಂಖ್ಯಾತರೂ ಆಗಂತುಕರೂ
ಅವರಾಗಿರಲು |
13 : ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ
ಅಲೆಯುತ್ತಿರಲು ||
14 : ಅವರಿಗಾರಿಂದಲೂ ಅನ್ಯಾಯವಾಗ ಗೊಡಿಸಲಿಲ್ಲ / ಅವರಿಗಾಗಿ ಅರಸರನೂ ಗದರಿಸದೆ ಬಿಡಲಿಲ್ಲ : //
15 : “ನಾನಭಿಷೇಕಿಸಿದವರನಿದೋ ಮುಟ್ಟಬೇಡಿ /
ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” //
16 : ತದನಂತರ ಬರಮಾಡಿದನಾ ನಾಡಿನಲಿ
ಕ್ಷಾಮವನು /
ಮುರಿದುಬಿಟ್ಟನು ಆಹಾರವೆಂಬಾ
ಊರುಗೋಲನು //
17 : ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು /
ದಾಸತ್ವಕೆ ಮಾರಲಾದ ಆ ಜೋಸೆಫನನು //
18 : ಅವನ ಕಾಲು ನೊಂದವು ಸಂಕೋಲೆಗಳಿಂದ /
ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ //
19 : ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು /
ಪ್ರಭುವಿನ ವಾಣಿ ಕಂಡು ಬಂದಿತು
ಸತ್ಯವೆಂದು //
20 : ಬಿಡಿಸಲವನನು ಅರಸ ಕಳಿಸಿದ ಆಳನು /
ಬಿಡುಗಡೆಮಾಡಿದ ಜನಾಧಿಪತಿ ಅವನನು //
21 : ನೇಮಿಸಿದವನನು ತನ್ನ ಮನೆಗೆ
ಯಜಮಾನನ್ನಾಗಿ /
ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ //
22 : ಪದಾಧಿಕಾರಿಗಳಿಗೆ ಶಿಕ್ಷಕನನ್ನಾಗಿಸಿದ /
ಮಂತ್ರಿಗಳಿಗೆಲ್ಲ ಉಪದೇಶಕನನ್ನಾಗಿಸಿದ //
23 : ಬಂದನು ಆಗ ಇಸ್ರಯೇಲನು ಈಜಿಪ್ಟಿಗೆ
ಪ್ರವಾಸಿಯಾದ ಯಕೋಬನು ಹಾಮ
ನಾಡಿಗೆ //
24 : ತನ್ನ ಜನರ ಸಂತಾನವನು ಪ್ರಭು ಅಭಿವೃದ್ಧಿಗೊಳಿಸಿದ / ಶತ್ರುಗಳಿಗಿಂತಲೂ ಅವರನು ಬಲಿಷ್ಠರನ್ನಾಗಿಸಿದ //
25 : ಮಾರ್ಪಡಿಸಿದ ಈಜಿಪ್ಟರನು ತನ್ನ ಜನರನು
ದ್ವೇಷಿಸುವಂತೆ |
ತನ್ನ ದಾಸರೊಡನವರು ಕುಯುಕ್ತಿಯಿಂದ
ನಡೆದುಕೊಳ್ಳುವಂತೆ ||
26 : ಕಳಿಸಿದ ತನ್ನ ದಾಸ ಮೋಶೆಯನು |
ತಾನು ಆರಿಸಿಕೊಂಡ ಆರೋನನನು ||
27 : ನೋಡಿದರಿವರು ಆತನ ಸೂಚಕ ಕಾರ್ಯಗಳನು |
ಹಾಮ ನಾಡಿನಲಿ ನಾನಾ ಅದ್ಭುತ
ಕಾರ್ಯಗಳನು ||
28 : ಕಾಳ ರಾತ್ರಿಯಾಯಿತು ಪ್ರಭು ಕಳಿಸಲು
ಕತ್ತಲನು |
ಈಜಿಪ್ಟರಾದರೊ ಇದಿರಿಸಿದರು ಆತನ
ಮಾತನು ||
29 : ರಕ್ತವಾಗಿಸಿದನಾತ ಅವರ ನದಿಗಳನು |
ಸಾಯಿಸಿದನು ಅವುಗಳಲಿದ್ದ ವಿೂನುಗಳನು ||
30 : ತುಂಬಿಕೊಂಡವು ಕಪ್ಪೆಗಳು ನಾಡಿನೊಳೆಲ್ಲ |
ಹರಡಿಕೊಂಡವು ಅರಸನ ಕೊಠಡಿಗಳಲೆಲ್ಲ ||
31 : ಕಾಣಿಸಿಕೊಂಡವು ಆತನಾಜ್ಞಾಪಿಸಲು |
ಹುಳುಹುಪ್ಪಟೆಗಳು ಪ್ರಾಂತ್ಯದೆಲ್ಲೆಡೆಯೊಳು ||
32 : ಮಳೆಗೆ ಬದಲು ಕಳಿಸಿದ ಕಲ್ಮಳೆಯನು |
ನಾಡಿನೆಲ್ಲೆಡೆಯೊಳು ಸಿಡಿಲುಮಿಂಚನು ||
33 : ನಾಶಮಾಡಿದ ನಾಡಿನ ಎಲ್ಲಾ
ಮರವೃಕ್ಷಗಳನು |
ದ್ರಾಕ್ಷಾಲತೆಗಳನ್ನು ಮೇಣ್ ಅಂಜೂರ
ಗಿಡಗಳನು ||
34 : ಆತ ನುಡಿದದ್ದೇ, ಬಂದವು ಮಿಡತೆಗಳು |
ಅಗಣಿತವಾದ ಸಂಖ್ಯೆಯಲಿ ಚಿಟ್ಟೆಹುಳುಗಳು ||
35 : ತಿಂದುಬಿಟ್ಟವವು ನಾಡಿನ ಬೆಳೆಯನು |
ಹೊಲಗದ್ದೆಗಳು ಇತ್ತ ಫಲವೆಲ್ಲವನು ||
36 : ಕೊಂದನು ನಾಡಿನ ಜ್ಯೇಷ್ಠರೆಲ್ಲರನು |
ಗಂಡಸುತನದಾ ಪ್ರಥಮ ಫಲಗಳನು ||
37 : ಹೊರತಂದನು ಇಸ್ರಯೇಲರನು ಬೆಳ್ಳಿಬಂಗಾರ
ಸಹಿತ |
ಅವರಾ ಗೋತ್ರದೊಳಿರಲಿಲ್ಲ ಯಾರೊಬ್ಬನೂ
ನಿಶ್ಯಕ್ತ ||
38 : ಭೀತಿಯಿತ್ತಾ ಈಜಿಪ್ಟರಿಗೆ ಇಸ್ರಯೇಲರ ಬಗ್ಗೆ |
ಈ ಕಾರಣ ಆನಂದಿಸಿದರು ಅವರು
ಹೋದುದಕ್ಕೆ ||
39 : ಹಗಲೊಳು ಮೋಡವಿತ್ತನವರಿಗೆ
ನೆರಳಿಗೋಸ್ಕರ |
ಇರುಳೊಳು ಬೆಂಕಿಯಿತ್ತನವರಿಗೆ
ಬೆಳಕಿಗೋಸ್ಕರ ||
40 : ಕೂಳನು ಕೇಳಿದಾಗ ಬರಮಾಡಿದನು
ಲಾವಕ್ಕಿಗಳನು |
ತೃಪ್ತಿಪಡಿಸಿದನು ಆಗಸದ
ಆಹಾರಗಳಿಂದವರನು ||
41 : ಬಂಡೆಯನಾತ ಸೀಳಲು ನೀರು ಹರಿದು
ಬಂದಿತು |
ನಿರ್ಜಲ ಪ್ರದೇಶದಲದು ನದಿಯಾಗಿ
ಹರಿಯಿತು ||
42 : ಸ್ಮರಿಸಿಕೊಂಡನು ಪ್ರಭು ತನ್ನ ವಾಗ್ದಾನವನು |
ತನ್ನ ದಾಸ ಅಬ್ರಹಾಮನಿಗೆ ಕೊಟ್ಟಾ
ಮಾತನು ||
43 : ಹೊರತಂದನು ತನ್ನ ಪ್ರಜೆಯನು
ಉಲ್ಲಾಸದಿಂದ |
ತಾನಾರಿಸಿಕೊಂಡವರನು
ಹರ್ಷೋದ್ಗಾರದಿಂದ ||
44 : ಕೊಟ್ಟನವರಿಗೆ ಅನ್ಯರಾಷ್ಟ್ರಗಳ ನಾಡುಬೀಡನು |
ಅವರ ಕೈವಶಮಾಡಿದನು ಅನ್ಯರ
ಕಷ್ಟಾರ್ಜಿತವನು ||
45 : ತನ್ನ ವಿಧಿಗಳಂತೆ ನಡೆಯಲೆಂದೇ |
ತನ್ನ ಶಾಸ್ತ್ರವನು ಅನುಸರಿಸಲೆಂದೇ |
ಈ ಪರಿ ಮಾಡಿದಾ ಸ್ವಾಮಿಗೆ ವಂದನೆ ||