1 : ಭಜಿಸು ನನ್ನ ಮನವೇ,
ಭಜಿಸು, ಪ್ರಭುವನು /
ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು /
ಮಹಿಮೆ ಪ್ರತಾಪಗಳಿಂದ ಭೂಷಿತನು //
2 : ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ /
ಹರಡಿಸಿರುವೆ ಆಗಸವನು ಗುಡಾರದಂತೆ //
3 : ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ |
ಮಾಡುವೆ ಸಂಚಾರ ಮಾರುತನ ರೆಕ್ಕೆಗಳ
ಮೇಲೆ |
ನಿನಗೆ ರಥವಾಹನಗಳು ಆ ಮುಗಿಲು
ಮೋಡಗಳೇ ||
4 : ಗಾಳಿಗಳೇ ನಿನಗೆ ದೂತರುಗಳು /
ಅಗ್ನಿಜ್ವಾಲೆಗಳೇ ಆಳುಗಳು //
5 : ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ /
ಅದೆಂದಿಗೂ ಕದಲದಂತೆ ಮಾಡಿರುವೆ //
6 : ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು / ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು //
7 : ತಲೆದೋರಿತು ಜಲ ನಿನ್ನ ಗದರಿಕೆಗೆ /
ಹೆದರಿ ಹಿಂಜರಿಯಿತು ನಿನ್ನ ಗರ್ಜನೆಗೆ //
8 : ತಲೆದೋರಿದವು ಬೆಟ್ಟಗುಡ್ಡಗಳು /
ತುಂಬಿಕೊಂಡವು ಹಳ್ಳಕೊಳ್ಳಗಳು /
ಅವೇ ನೀ ನೇಮಿಸಿದ ಸ್ಥಳಗಳು //
9 : ಗೊತ್ತುಮಾಡಿರುವೆ ಆ ಜಲರಾಶಿಗೆ
ಮೇರೆಯನು /
ಅವು ಮತ್ತೆ ಮುಚ್ಚದಂತೆ ಮಾಡಿರುವೆ
ಭೂಮಿಯನು //
10 : ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ /
ನದಿಗಳ ಹರಿಯಮಾಡುವೆ ಗುಡ್ಡಗಳ
ನಡುವೆಯಲಿ //
11 : ನೀರ ನೀಡುವವು ಕುಡಿಯಲಿಕ್ಕೆ
ಕಾಡುಮೃಗಗಳಿಗೆ /
ದಾಹ ನೀಗಿಸಿಕೊಳ್ಳಲು ಆ ಕಾಡುಕತ್ತೆಗಳಿಗೆ //
12 : ಅವುಗಳ ಅರುಗಲ್ಲೇ ಇವೆ ಹಕ್ಕಿಗಳ
ಗೂಡುಗಳು /
ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ
ಕಲರವಗಳು //
13 : ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ / ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆ ಗಳಿಂದ //
14 : ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ |
ಬೆಳೆಸುವೆ ಪೈರನು ನರಮಾನವರಿಗೋಸ್ಕರ ||
15 : ಒದಗಿಸುವೆ ಬೇಸಾಯದ ಆಹಾರವನು /
ಹೃದಯವನು ಮುದಗೊಳಿಸುವ
ದ್ರಾಕ್ಷಾರಸವನು /
ಮುಖಕೆ ಮೆರಗನ್ನೀಯುವ ತಿಳಿತೈಲಗಳನು /
ದೇಹವನು ಗಟ್ಟಿಮುಟ್ಟಾಗಿಸುವ
ರೊಟ್ಟಿಯನು //
16 : ಜಲವಿದೆ ಲೆಬನೋನಿನ ದೇವದಾರು
ವೃಕ್ಷಗಳಿಗೆ |
ನೀರು ಬೇಕಾದಷ್ಟಿದೆ ಪ್ರಭು ನೆಟ್ಟ ಮರಗಳಿಗೆ ||
17 : ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ /
ವಾಸಮಾಡುವುವು ಕೊಕ್ಕರೆಗಳು
ತುರಾಯಿಮರಗಳಲಿ //
18 : ಬೆಟ್ಟಗುಡ್ಡಗಳಿವೆ ಕಾಡುಕುರಿಗಳಿಗೆ /
ಬಂಡೆಬಿರುಕುಗಳಿವೆ ಬೆಟ್ಟದ ಮೊಲಗಳಿಗೆ //
19 : ಋತು ಸೂಚನೆಗಾಗಿ ನೀ ನಿರ್ಮಿಸಿದೆ
ಚಂದ್ರನನು /
ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು //
20 : ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು /
ತಿರುಗಾಡುತ್ತವೆ ಆಗ ಕಾಡಿನ ಜೀವ
ಜಂತುಗಳು //
21 : ಗರ್ಜಿಸುತ್ತವೆ ಪ್ರಾಯಸಿಂಹಗಳು ಬೇಟೆಗಾಗಿ /
ದೇವರನ್ನು ಎದುರು ನೋಡುತ್ತವೆ
ಆಹಾರಕ್ಕಾಗಿ //
22 : ಮರಳುತ್ತವೆ ಸೂರ್ಯೋದಯವಾಗಲು /
ತಂತಮ್ಮ ಗವಿಗುಹೆಗಳಲಿ ಮಲಗಲು //
23 : ಹೊರಡುತ್ತಾನಾಗ ಮಾನವ ಕೆಲಸಕೆ /
ದುಡಿಯುತ್ತಾನೆ ಸಾಯಂಕಾಲದವರೆಗೆ //
24 : ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ /
ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ //
25 : ಸಮುದ್ರವಿದೊ ಎಷ್ಟು ಅಪಾರ, ಅದೆಷ್ಟು
ವಿಶಾಲ /
ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ
ಲೆಕ್ಕವಿಲ್ಲ //
26 : ಓಡಾಡುತ್ತವದರೊಳು ಹಡಗುಗಳು /
ನೀನುಂಟುಮಾಡಿದ ತಿಮಿಂಗಿಲಗಳು //
27 : ಸಕಾಲದಲೊದಗಿಸುವೆ ಆಹಾರವನು /
ನಂಬಿಕೊಂಡಿವೆ ಈ ಜೀವಿಗಳು ನಿನ್ನನು //
28 : ನೀ ನೀಡಲು ಕೂಡಿಸಿಟ್ಟುಕೊಳ್ಳುವುವು / ನೀ ಕೈತೆರೆಯಲವು ಸಂತೃಪ್ತಿಪಡೆವುವು //
29 : ತಲ್ಲಣಗೊಳ್ಳುವುವು ನೀ ಮುಖ
ಮರೆಮಾಡಿಕೊಳ್ಳಲು |
ಮಣ್ಣುಪಾಲಾಗುವುವು ನೀನವುಗಳ
ಉಸಿರನಡಗಿಸಲು ||
30 : ನೀ ಉಸಿರನ್ನೂದಲು ಹೊಸದಾಗುವುವು /
ಪುನಶ್ಚೇತನಗೊಳ್ಳುವುದು ಜಗವೆಲ್ಲವು //
31 : ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತ
ವಾಗಿ /
ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ //
32 : ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ /
ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ //
33 : ಪ್ರಭುವನು ನಾ ಹೊಗಳಿ ಹಾಡುವೆನು
ಬಾಳಿನೊಳೆಲ್ಲ /
ನನ್ನ ದೇವನನು ಭಜಿಸುವೆನು ನಾ
ಜೀವಮಾನವೆಲ್ಲ //
34 : ಆತನಿಗೊಲಿಯಲಿ ನನ್ನ ಧ್ಯಾನ /
ಆತನಲೇ ಹರ್ಷಿಸಲಿ ನನ್ನ ಮನ //
35 : ದಹಿಸಿಹೋಗಲಿ ಧರೆಯಿಂದ ದುಷ್ಟರು /
ನಿರ್ಮೂಲವಾಗಲಿ ಸಕಲ ದುರುಳರು /
ಪ್ರಭುವನು ನನ್ನ ಮನ ಸ್ತುತಿಸಲಿ /
ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ //