1 : ಭಜಿಸು ನನ್ನ ಮನವೇ,
ಭಜಿಸು ಪ್ರಭುವನು /
ನನ್ನ ಅಂತರಂಗವೇ, ಭಜಿಸು ಆತನನು /
ನೆನೆ ಆತನ ಪರಮಪಾವನ ನಾಮವನು //
2 : ಭಜಿಸು ನನ್ನ ಮನವೇ, ಭಜಿಸು ಪ್ರಭುವನು /
ಮರೆಯದಿರು ಆತನ ಉಪಕಾರಗಳೊಂದನು //
3 : ಮನ್ನಿಸುವನಾತ ನನ್ನ ದೋಷಗಳನು / ವಾಸಿಮಾಡುವನು ನನ್ನ ರೋಗಗಳನು //
4 : ಉಳಿಸುವನು ಪಾತಾಳದ ಕೂಪದಿಂದ ನನ್ನನು /
ಮುಡಿಸುವನೆನಗೆ ದಯದಾಕ್ಷಿಣ್ಯದ
ಮುಕುಟವನು //
5 : ಒಳ್ಳೆಯವುಗಳಿಂದ ತುಂಬಿಸುವನು ನನ್ನ
ಜೀವಮಾನವನು /
ಪುನರುಜ್ಜೀವನಗೊಳಿಸುವನು ಗರುಡನಂತೆ ನನ್ನ
ಯೌವನವನು //
6 : ಸಾಧಿಸುವನು ಪ್ರಭು ನ್ಯಾಯನೀತಿಯನು /
ದೊರಕಿಸುವನು ಶೋಷಿತರಿಗೆ ನ್ಯಾಯವನು //
7 : ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ /
ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ //
8 : ಪ್ರಭು ದಯಾಳು, ಕೃಪಾಪೂರ್ಣನು /
ಸಹನಶೀಲನು, ಪ್ರೀತಿಮಯನು //
9 : ಆತನು ಸದಾ ತಪ್ಪು ಹುಡುಕುವವನಲ್ಲ /
ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ //
10 : ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ /
ನಮ್ಮ ಅಪರಾಧಗಳಿಗೆ ತಕ್ಕಹಾಗೆ
ದಂಡಿಸಲಿಲ್ಲ //
11 : ಆಕಾಶಮಂಡಲವು ಭೂಮಿಯಿಂದೆಷ್ಟೋ
ಉನ್ನತ /
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ
ಸನ್ನುತ //
12 : ಪಡುವಣದಿಂದ ಮೂಡಣವೆಷ್ಟೋ ದೂರ /
ದೂಡಿದನಾತ ನಮ್ಮ ಪಾಪಗಳನು ಅಷ್ಟು
ದೂರ //
13 ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ /
13 : ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ /
ಕನಿಕರಿಸುವನಾತ ತನಗೆ ಅಂಜುವವರಿಗೆ //
14 : ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ /
ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ //
15 : ಮಾನವನ ಆಯುಷ್ಕಾಲ ಹುಲ್ಲಿಗೆ ಸಮಾನ /
ಹೊಲದ ಹೂವಿನಂತೆ ಅವನ
ಬೆಡಗುಬಿನ್ನಾಣ //
16 : ಬಿದ್ದುಹೋಗುವುದಾ ಹೂವು ಗಾಳಿಯ
ಬಡಿತಕ್ಕೆ /
ಅದರ ಗುರುತೂ ಇರದಲ್ಲಿ ಮರಳಿ
ನೋಡಲಿಕ್ಕೆ //
17 : ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ
ಯುಗಯುಗಾಂತರಕು /
ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು
ತಲತಲಾಂತರಕು //
18 : ಅಂತೆಯೇ ಆತನ ನಿಬಂಧನೆಗಳನು
ಕೈಗೊಳ್ಳುವವರಿಗೆ /
ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು
ನಡೆವವರಿಗೆ //
19 : ಸ್ಥಾಪಿಸಿಹನು ಪ್ರಭು ಸ್ವರ್ಗದೊಳು
ಸಿಂಹಾಸನವನು /
ಎಲ್ಲದರ ಮೇಲೆ ನಡೆಸುತಿಹನು
ರಾಜ್ಯಾಡಳಿತವನು //
20 : ಭಜಿಸಿರಿ ಪ್ರಭುವನು ದೇವದೂತರುಗಳೇ /
ಆತನ ಆಣತಿ ಪಾಲಿಪ ಪರಾಕ್ರಮಿಗಳೇ /
ಆತನ ನುಡಿಯಂತೆಯೇ ನಡೆಯುವ
ಜನಾಂಗಗಳೇ //
21 : ಪ್ರಭುವನು ಭಜಿಸಿರಿ ಆತನ ಸೇನೆಗಳೇ /
ಭಜಿಸು ಪ್ರಭುವನು, ಓ ಎನ್ನಮನವೇ //
22 : ಭಜಿಸಿರಿ ಪ್ರಭುವನು ಆತನ ಸೃಷ್ಟಿಗಳೇ /
ಆತನ ಅಧಿಕಾರದಲ್ಲಿಹ ಸಕಲ ವಸ್ತುಗಳೇ /
ಭಜಿಸು ಪ್ರಭುವನು, ಓ ಎನ್ನಮನವೇ //