Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೀರ್ತನೆ


1 : ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ / ನನ್ನ ಕೂಗು ಸೇರಲಿ ನಿನ್ನ ಬಳಿಗೆ //
2 : ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ / ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ //
3 : ಮಾಯವಾಗುತ್ತಿದೆ ನನ್ನೀ ಜೀವಮಾನ ಹೊಗೆಯಂತೆ / ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ ಕೊರಡಿನಂತೆ //
4 : ಬಿಸಿಲಿಗೆ ಬಾಡಿದ ಹುಲ್ಲಿನಂತಿದೆ ಎನ್ನೆದೆ / ತಿಂಡಿತೀರ್ಥವನುಣ್ಣಲೂ ನಾ ಮರೆತು ಹೋದೆ //
5 : ಕೂಗಿ ನಾ ನಿಟ್ಟುಸಿರಿಟ್ಟೆ | ಎಲುಬು ತೊಗಲು ಆಗಿಬಿಟ್ಟೆ ||
6 : ಅಡವಿಯ ರಣಹದ್ದಿಗೆ ಸಮನಾದೆ / ಹಾಳೂರಿನ ಗೂಗೆಯ ಹಾಗಾದೆ //
7 : ಮನೆಮೇಲಿನ ಒಂಟಿ ಪಕ್ಷಿಯಾದೆ / ಬಳಲುತ್ತಿರುವೆನು ನಿದ್ರೆಯಿಲ್ಲದೆ //
8 : ವೈರಿಗಳು ದಿನವಿಡೀ ನನ್ನ ನಿಂದಿಸುತ್ತಿಹರು / ದ್ವೇಷಿಗಳು ನನ್ನ ಹೆಸರೆತ್ತಿ ಶಪಿಸುತ್ತಿಹರು //
9 : ಬೂದಿಯೇ ನನಗೆ ಆಹಾರವಾಯಿತು / ಪಾನದಲಿ ಕಣ್ಣೀರು ಮಿಶ್ರವಾಯಿತು //
10 : ನಿನ್ನ ಕೋಪತಾಪಗಳೆ ಕಾರಣ ಇದಕ್ಕೆಲ್ಲಾ / ನನ್ನನು ಮೇಲಕೆತ್ತಿ ಬಿಸಾಡಿಬಿಟ್ಟರುವೆಯಲ್ಲಾ //
11 : ನನ್ನ ಬಾಳು ಬೈಗಿನ ನೆರಳಂತೆ / ನಾನಿರುವೆ ಬಾಡಿದ ಹುಲ್ಲಿನಂತೆ //
12 : ನೀನಾದರೋ ಪ್ರಭು, ಸದಾ ಸಿಂಹಾಸನಾರೂಢ / ಮಾಳ್ಪರು ತಲತಲಾಂತರಕು ನಿನ್ನ ನಾಮಸ್ಮರಣ //
13 : ಎದ್ದು ಸಿಯೋನಿಗೆ ತೋರು ಸೌಜನ್ಯತೆ / ಅದಕ್ಕೆ ದಯೆತೋರಿಸುವ ಸಮಯವಿದೇ / ನಿಯಮಿತ ಕಾಲವಿದೋ ಬಂದುಬಿಟ್ಟಿದೆ //
14 : ಕಲ್ಲುಕುಪ್ಪೆಯಾಗಿದ್ದರೂ ನಿನ್ನ ಭಕ್ತರಿಗದು ಪ್ರಿಯ / ಅದರ ವಿನಾಶವನು ಕಂಡು ಕರಗಿಹೋಗಿದೆ ಹೃದಯ /
15 : ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು / ಭಯಪಡುವರು ನಿನ್ನ ಪ್ರತಾಪಕೆ ಭೂ ರಾಜರುಗಳು //
16 : ಏಕೆನೆ ಪುನರುದ್ಧರಿಸುವನು ಸಿಯೋನನು / ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು //
17 : ತಿರಸ್ಕರಿಸನಾತ ನಿರ್ಗತಿಕರ ಮೊರೆಯನು / ನೆರವೇರಿಸದೆ ಬಿಡನು ಅವರ ಕೋರಿಕೆಯನು //
18 : ಮುಂದಣ ಸಂತತಿಗಿದು ಶಾಸನವಾಗಿರಲಿ / ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ //
19 : ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ / ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ //
20 : ಆಲಿಸಿದಾತನು ಬಂಧಿತರ ಗೋಳಾಟವನು / ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು //
21 : ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು / ಜನಾಂಗಗಳೂ ರಾಜ್ಯಗಳೂ ಕೂಡಿರಲು /
22 : ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ / ಆತನ ಗುಣಗಾನವಿರುವುದು ಆ ಜೆರುಸಲೇಮಿನಲಿ //
23 : ನಡುಹಾದಿಯಲೆ ಕುಂದಿಸಿಹನು ಪ್ರಭು ನನ್ನ ಬಲವನು / ಕಡಿಮೆಮಾಡಿಬಿಟ್ಟಿಹನು ಆತ ನನ್ನ ಆಯುಷ್ಯವನು //
25 : ಆದಿಯಲೆ ನೀ ಭುವಿಗೆ ಅಸ್ತಿವಾರ ಹಾಕಿದೆ / ಗಗನಮಂಡಲವು ಸಹ ನಿನ್ನ ಸೃಷ್ಟಿಯಾಗಿದೆ //
26 : ನೀನಾದರೋ ಉಳಿದಿರುವೆ, ಅವೋ ಅಳಿದುಹೋಗುವುವು / ಹಳೆಯದಾಗುತ್ತವೆ ಬಟ್ಟೆಯಂತೆ ಅವೆಲ್ಲವು / ಉಡುಪಿನಂತೆ ಬದಲಿಸುತ್ತ, ಮಾರ್ಪಡುತ್ತವೆ ಅವು //
27 : ನೀನಂತೂ ಬದಲಾಗದೆ ಇರುವೆಯಯ್ಯಾ / ನಿನ್ನ ವರುಷಗಳಿಗೆ ಮುಗಿವೇ ಇಲ್ಲವಯ್ಯಾ //
28 : ಬಾಳುವರು ನಿನ್ನ ದಾಸರ ಮಕ್ಕಳು ಸುರಕ್ಷಿತವಾಗಿ / ಇರುವುದವರ ಸಂತತಿ ನಿನ್ನ ಸಮ್ಮುಖದಲಿ ಸ್ಥಿರವಾಗಿ //

· © 2017 kannadacatholicbible.org Privacy Policy