1 : ನನ್ನಿಂದೇಕೆ ಪ್ರಭು, ಅಷ್ಟು
ದೂರವಿರುವೆ? /
ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? //
2 : ಸೊಕ್ಕಿನಿಂದ ಶೋಷಿಸುತಿಹರು ದಲಿತರನು
ದುರುಳರು /
ಸಿಕ್ಕಿಬೀಳಲಿ ತಾವೇ ಒಡ್ಡಿದ ಉರಿಲಿನೊಳವರು /
3 : ಕೇಡಿಗನು ತನ್ನ ಮನದಾಸೆಗಾಗಿ
ಹೆಮ್ಮೆಪಡುತಿಹನು /
ಲಾಭಬಡುಕನು ಪ್ರಭುವನು ಶಪಿಸಿ
ತಿರಸ್ಕರಿಸುತಿಹನು //
4 : ಸೊಕ್ಕೇರಿದ ಮುಖದಾತನು
ಪ್ರಭುವನು ಅರಸುವುದಿಲ್ಲ /
ಅವನ ಮನದೊಳಿದೊಂದೇ ಭಾವನೆ:
“ದೇವರೇ ಇಲ್ಲ”! //
5 : ಗೆಲುವೆ ಅವನ ವ್ಯವಹಾರವೆಲ್ಲದರ ಸಾರ /
ನಿನ್ನ ನಿರ್ಣಯ ಅವನ ಗ್ರಹಿಕೆಗೆ ಅತಿ ದೂರ //
ಶತ್ರುಗಳನು ಕಂಡರೆ ಅವನಿಗೆ ತಾತ್ಸಾರ //
6 : ನೆನೆವನು ಮನದೊಳು ದುರುಳನಿಂತು: /
“ಯಾರಿಗೂ ನನ್ನ ಕದಲಿಸಲಾಗದು /
ಬಾರದು ನನಗೆಂದಿಗು ಆಪತ್ತು”//
7 : ತುಂಬಿದೆ ಶಾಪಕೋಪ, ಕುತಂತ್ರ ಅವನ
ಬಾಯಲಿ /
ಅವಿತಿದೆ ಪಾಪ, ಅತಿವಿನಾಶ
ನಾಲಗೆಯಡಿಯಲಿ //
8 : ಊರು ಸಂದುಗೊಂದುಗಳಲೆ ಅವಿತಿದ್ದು /
ನಿರ್ಗತಿಕರಿಗಾಗಿ ಅಲ್ಲೆ ಕಾದಿದ್ದು /
ಕೊಲೆಗೈವನು ಮರೆಯಲ್ಲೆ ಮೇಲೆಬಿದ್ದು //
9 : ಹೊಂಚುಹಾಕುವನವನು ಗುಹೆಯೊಳಗಿನ
ಸಿಂಹದಂತೆ /
ಕಾಯ್ದು ಹಿಡಿದೆಳೆವನು ದಲಿತರನು ಬಲೆಗೆ
ಬೀಳ್ವಂತೆ //
10 : ಬಲಿಯಾಗಿಹನು ಬಲತ್ಕಾರಕೆ ಅಬಲನು /
ಕುಸಿದು ಬಿದ್ದಿಹನು ಜಜ್ಜರಿತವಾಗವನು //
11 : ಮನದೊಳಿಂತೆಂದು ನೆನೆದನಾ ದುರುಳನು: /
“ದೇವನಿದನು ಮರೆತು ವಿಮುಖನಾಗಿಹನು /
ಇನ್ನೆಂದಿಗು ನೋಡನು ಇದೆಲ್ಲವನು” //
12 : ಎದ್ದೇಳು ಪ್ರಭು, ದಲಿತನನು
ಮರೆಯದಿರಯ್ಯಾ /
ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ //
13 : ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? /
“ದೇವನೆನ್ನ ವಿಚಾರಿಸನು”
ಎನ್ನುವುದೆಂತು? //
14 : ಹೌದು ದೇವಾ, ನೀ ವಿಚಾರಿಪವನು;
ದುಃಖದುಗುಡ ಲೆಕ್ಕಿಸುವವನು /
ತಬ್ಬಲಿಗಳಿಗೆ ತಂದೆ ನೀನು,
ನಿರ್ಗತಿಕ ನಿನಗೆ ಶರಣಾಗತನು //
15 : ಧೂರ್ತನ, ದುರುಳನ ಭುಜಬಲವನು
ನೀ ಮುರಿದು ಬಿಡು /
ಆತನ ನೀಚತನವನು ಪರೀಕ್ಷಿಸಿ
ಶೂನ್ಯಮಾಡು //
16 : ಪ್ರಭುವಿನ ಶ್ರೀಸಾಮ್ರಾಜ್ಯವು ಅನವರತ /
ಆತನ ನಾಡಲಿ ಮುಗಿಯಿತು ಅನ್ಯಜನರ
ಉಳಿತ //
17 : ದೀನ ಕೋರಿಕೆಯನು ಪ್ರಭು, ತೀರಿಸುವೆ /
ಹುರಿದುಂಬಿಸಿ, ಅವರ ಮೊರೆಗೆ
ಕಿವಿಗೊಡುವೆ //
18 : ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು
ದೊರಕಿಸುವೆ /
ಈ ಪರಿ ಇಳೆಮಾನವರ ತುಳಿತದಿಂದ
ಪಾರುಮಾಡುವೆ //