1 : ಅದಕ್ಕೆ ಯೋಬನು ಉತ್ತರಿಸುತ್ತಾ
ಹೀಗೆಂದನು:
2 : “ಹೌದು, ನೀನು ಹೇಳುವುದು ಸರಿಯೆಂದು ನನಗೆ ಗೊತ್ತು: ನರಮಾನವ ದೇವರ ಮುಂದೆ ಸತ್ಯವಂತನಾಗಿರುವುದೆಂತು?
3 : ಯಾರಾದರೂ ಆತನೊಡನೆ ವಾದಿಸಲು ಇಷ್ಟಪಟ್ಟರೂ ಆತನ ಸಹಸ್ರ ಪ್ರಶ್ನೆಗಳೊಂದಕ್ಕೂ ಉತ್ತರಿಸಲಾಗದು.
4 : ದೇವರ ಹೃದಯ ಧೀಮಂತ, ಅವರ ಶಕ್ತಿ
ಅತುಳ
ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.
5 : ಆತ ಪರ್ವತಗಳನ್ನೇ ಸರಿಸುತ್ತಾನೆ ಅರಿಯದಂತೆ
ಅವುಗಳನ್ನು ಉರುಳಿಸುತ್ತಾನೆ ಸಿಟ್ಟುಗೊಂಡಂತೆ.
6 : ಅದರ ಸ್ಥಾನದಿಂದ ಭೂಮಿಯನೆ
ಕದಲಿಸುತ್ತಾನೆ
ಅದರ ಸ್ತಂಭಗಳು ನಡುಗುವಂತೆ
ಮಾಡುತ್ತಾನೆ.
7 : ಆತ ಆಜ್ಞೆ ಮಾಡಿದ್ದೇ ಆದರೆ ಸೂರ್ಯನೂ
ಉದಯಿಸನು
ಮುದ್ರೆಹಾಕಿದ್ದೇ ಆದರೆ ನಕ್ಷತ್ರವೂ ಮಿನುಗದು.
8 : ಆಕಾಶಮಂಡಲವನ್ನು ಹರಡಿದವನು ದೇವರೇ
ಕಡಲಿನ ತರಂಗಗಳನ್ನು ಮೆಟ್ಟಿದವನು
ಆತನೊಬ್ಬನೇ.
9 : ದಕ್ಷಿಣದ ನಕ್ಷತ್ರಗ್ರಹಗಳನೂ ಸಪ್ತರ್ಷಿ
ಮಂಡಲವನೂ
ಮೃಗಶಿರವನ್ನೂ ಕೃತ್ತಿಕೆಯನೂ
ನಿರ್ಮಿಸಿದವನು ಆತನೇ.
10 : ಅಪ್ರತಿಮ ಮಹಾಕಾರ್ಯಗಳನ್ನು ಎಸಗಿರುವನು
ಅಸಂಖ್ಯ ಅದ್ಭುತಕರ ಪವಾಡಗಳನು
ಮಾಡಿರುವನು.
11 : ಇಗೋ, ಪಕ್ಕದಲ್ಲೇ ಆತ ದಾಟಿಹೋದರೂ
ಕಾಣಿಸನು
ನನ್ನ ಮುಂದುಗಡೆಯೇ ಹಾದು ಹೋದರೂ
ತಿಳಿಯದು.
12 : ಕಿತ್ತುಕೊಂಡು ಹೋಗುವ ಆತನಿಗೆ
ಅಡ್ಡಿಮಾಡುವವರಾರು?
‘ಏನು ಮಾಡುತ್ತಿರುವೆ?’ ಎಂದು ಆತನನ್ನು
ಕೇಳುವವರಾರು?
13 : ರಹೆಬನ ಸಹಾಯಕರು ಕಾಲಿಗೆರಗಿದರೂ
ದೇವರು ತನ್ನ ಸಿಟ್ಟು ಸಿಡುಕನು ಬಿಟ್ಟುಬಿಡನು.
14 : ದೇವರೊಂದಿಗೆ ವಾದಿಸಲು ನಾನು ಅಶಕ್ತನು
ಆತನಿಗೆ ತಕ್ಕ ಉತ್ತರ ಕೊಡಲು ನಾನೆಷ್ಟರವನು!
15 : ನಾನು ಸತ್ಯವಂತನಾಗಿದ್ದರೂ ವಾದಿಸಲಾರೆನು
ನನ್ನ ನ್ಯಾಯಾಧೀಶನಲ್ಲಿ ದಯೆಯನು
ಕೋರುವೆನು.
16 : ನಾನು ಕರೆದಾಗ ಓಗೊಟ್ಟಿದ್ದರೂ
ನನ್ನ ವಿಜ್ಞಾಪನೆಯನ್ನು ಆಲಿಸುವನೆಂದು
ನಂಬುತ್ತಿರಲಿಲ್ಲ.
17 : ನನ್ನನ್ನು ಬಿರುಗಾಳಿಯಿಂದ ಬಡಿಯುತ್ತಾನೆ
ಕಾರಣವಿಲ್ಲದೆ ಗಾಯದ ಮೇಲೆ ಗಾಯ
ಮಾಡುತ್ತಾನೆ.
18 : ನನಗೆ ಉಸಿರಾಡಲೂ ಬಿಡದೆ
ನನ್ನ ಹೊಟ್ಟೆಯನ್ನು ಕಹಿಯಾದವುಗಳಿಂದ
ತುಂಬಿಸುತ್ತಾನೆ.
19 : ಶಕ್ತಿಪ್ರಯೋಗದ ಮಾತೆತ್ತಿದರೆ,
‘ಇಗೋ, ನಾನೇ ಶಕ್ತಿಸ್ವರೂಪ’ ಎನ್ನುತ್ತಾನೆ.
ನ್ಯಾಯವಿಚಾರಣೆ ಆಗಲಿಯೆಂದರೆ,
‘ನನ್ನನ್ನು ಕರೆಯಿಸುವವನಾರು?’ ಎನ್ನುತ್ತಾನೆ.
20 : ನಾನು ಸತ್ಯವಂತನಾಗಿದ್ದರೂ
ಬಾಯೇ ನಾನು ಅಪರಾಧಿಯೆಂದು
ಒಪ್ಪಿಕೊಳ್ಳುತ್ತದೆ.
ನಾನು ನಿರ್ದೋಷಿಯಾಗಿದ್ದರೂ
‘ನಿನ್ನದು ವಕ್ರ ಬುದ್ಧಿ’ ಎನ್ನುತ್ತದೆ.
21 : ನಾನು ನಿರ್ದೋಷಿಯೇ ಹೌದು;
ಅದರ ಬಗ್ಗೆ ನನಗಿಲ್ಲ ಚಿಂತೆ.
ನನ್ನ ಪ್ರಾಣ ಕೂಡ ನನಗೆ ತೃಣವಾಗಿಬಿಟ್ಟಿದೆ.
22 : ಎಲ್ಲವೂ ಒಂದೇ ಆಗಿಬಿಟ್ಟಿದೆ. ಆದ್ದರಿಂದಲೇ
ಇಂತೆನ್ನುತ್ತೇನೆ:
‘ದೋಷಿಯೋ ನಿರ್ದೋಷಿಯೋ’
ದೇವರು ಎಲ್ಲರನೂ ನಾಶಗೊಳಿಸುತ್ತಾನೆ.
23 : ಅಕಸ್ಮಾತ್ತಾಗಿ ಮಹಾವಿನಾಶ
ಬಂದೊದಗಿದರೂ
ನಿರ್ದೋಷಿಗಳ ಅವಸ್ಥೆಕಂಡು
ಹಾಸ್ಯಮಾಡುತ್ತಾನೆ.
24 : ದೇಶವು ದುರುಳರ ಕೈವಶವಾಗಿದ್ದರೂ
ನ್ಯಾಯಾಧೀಶರ ಮುಖಕ್ಕೆ ಮುಸುಕು
ಹಾಕುತ್ತಾನೆ.
ಇದನ್ನು ಮಾಡುವವರು ದೇವರಲ್ಲದೆ
ಮತ್ತೆ ಯಾರು?
25 : ನನ್ನ ದಿನಗಳು ಓಟಗಾರನಿಗಿಂತ ವೇಗ
ಅವು ಓಡುತ್ತವೆ ಕಾಣದೆ ಯಾವುದೊಂದು
ಸುಖ.
26 : ಬೆಂಡಿನ ಹರಗಲು ದೌಡಾಯಿಸುವಂತೆ
ಬೇಟೆಯ ಮೇಲೆ ಗರುಡವೆರಗುವಂತೆ
ಕಳೆದು ಹೋಗುತ್ತವೆ ಶೀಘ್ರಗತಿಯಲ್ಲೆ.
27 : ನನ್ನ ಪ್ರಲಾಪವನ್ನು ನಾನು ಮರೆತುಬಿಟ್ಟರೆ
ಬಾಡಿದ ಮುಖವನ್ನು ಮಾರ್ಪಡಿಸಿಕೊಂಡರೆ
ಹರ್ಷಿಸುವೆನೆಂದು ನಾನು ಮನಸ್ಸು ಮಾಡಿದರೆ.
28 : ಸಮಸ್ತ ದುಃಖದುಗುಡಗಳ ನೆನಪು ನನಗೆ
ತರುತ್ತವೆ ದಿಗಿಲು
ನನಗೆ ಗೊತ್ತು, ನೀ ನನ್ನನು ನಿರಪರಾಧಿ
ಎಂದೆಣಿಸಲಾರೆಯೆಂದು.
28 : ಅಪರಾಧಿಯೆಂದೇ ನನಗೆ ನಿರ್ಣಯವಾಗ
ಬೇಕಿದ್ದಲ್ಲಿ
ನಾನೇಕೆ ಪ್ರಯಾಸ ಪಡಬೇಕು ವ್ಯರ್ಥವಾಗಿ?
29 : ಅಪರಾಧಿಯೆಂದೇ ನನಗೆ ನಿರ್ಣಯವಾಗ
ಬೇಕಿದ್ದಲ್ಲಿ
ನಾನೇಕೆ ಪ್ರಯಾಸ ಪಡಬೇಕು ವ್ಯರ್ಥವಾಗಿ?
30 : ಹಿಮದಿಂದ ನಾನು ಸ್ನಾನ ಮಾಡಿದರೂ
ಚೌಳಿನಿಂದ ನಾನು ಕೈ ತೊಳೆದರೂ
31 : ಮುಳುಗಿಸಿ ಬಿಡುವೆ ನನ್ನನ್ನು ತಿಪ್ಪೆಗುಂಡಿಯಲ್ಲಿ
ನನ್ನ ಉಡಿಗೆ ತೊಡಿಗೆಗಳೂ ಅಸಹ್ಯಪಡುವುವು
ನನ್ನನು ನೋಡಿ.
32 : ದೇವರು ನನ್ನಂಥ ನರನಲ್ಲ, ನಾನಾತನಿಗೆ
ಉತ್ತರಿಸಲು
ನಾವಿಬ್ಬರೂ ನ್ಯಾಯಾಲಯದಲ್ಲಿ ಕೂಡಿ
ವಾದಿಸಲು.
33 : ನಮ್ಮಿಬ್ಬರ ನಡುವೆ ನಿರ್ಣಯಿಸತಕ್ಕವನು ಇಲ್ಲ
ಮಧ್ಯಸ್ಥನಾಗಬಲ್ಲ ನ್ಯಾಯಾಧಿಪತಿ ಇಲ್ಲ.
34 : ನನ್ನ ಮೇಲೆತ್ತಿರುವ ಕೋಲನ್ನು ಬಿಸಾಡಲಿ
ಆತನ ಭಯಭೀತಿ ನನ್ನನು ಹೆದರಿಸದಿರಲಿ.
35 : ಆಗ ಭಯಪಡದೆ ಮಾತನಾಡುವೆನು ಅಂಜಿಕೆಗೆ ನನ್ನಲ್ಲಿ ಆಸ್ಪದ ಇರದು.